ಐಶ್ವರ್ಯ ರೈ ಜೊತೆ ನಟಿಸಲು ಈ ಕಾರಣಕ್ಕಾಗಿ ಹಿಂದೆ ಸರಿದ ಸಲ್ಮಾನ್

0
7

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಜೊತೆ ನಟಿಸಲು ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಹಿಂದೇಟು ಹಾಕಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ `ಪದ್ಮಾವತಿ’ ಸಿನಿಮಾದಲ್ಲಿ ಮೊದಲಿಗೆ ಐಶ್ವರ್ಯ ಮತ್ತು ಸಲ್ಮಾನ್ ಖಾನ್‍ಗೆ ಆಫರ್ ನೀಡಲಾಗಿತ್ತು. ಈ ಆಫರ್‍ನ್ನು ಪುರಸ್ಕರಿಸಿದ ಐಶ್ವರ್ಯಾ ಷರತ್ತೊಂದನ್ನು ವಿಧಿಸಿದ್ದರು. ಸಿನಿಮಾದಲ್ಲಿ ಪದ್ಮಾವತಿಯಾಗಿ ನಾನು ನಟಿಸಿದರೆ ಸಲ್ಮಾನ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ನಟಿಸಬೇಕೆಂಬ ಷರತ್ತನ್ನು ಐಶ್ವರ್ಯ ವಿಧಿಸಿದ್ದರು.

ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವೆ ರೋಮ್ಯಾಂಟಿಕ್ ಸೀನ್‍ಗಳಿಲ್ಲದ ಕಾರಣ ಸಲ್ಮಾನ್ ಚಿತ್ರವನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಈ ಹಿಂದೆ ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ‘ಯೇ ಜವಾನಿ ಹೇ ದಿವಾನಿ’ ಮತ್ತು ‘ತಮಾಷಾ’ ಚಿತ್ರದಲ್ಲಿ ಹಾಗೂ ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ‘ಏಕ್ ಥಾ ಟೈಗರ್’ ಸಿನಿಮಾಗಳಲ್ಲಿ ನಟಿಸಿ ಮಾಜಿ ಪ್ರೇಮಿಗಳು ಒಳ್ಳೆಯ ಸ್ನೇಹಿತರು ಆಗಬಹುದೆಂದು ತೋರಿಸಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿಯವರು ‘ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದಲ್ಲಿ ಐಶ್ ಮತ್ತು ಸಲ್ಲುನನ್ನು ಜೊತೆಯಾಗಿ ತೆರೆ ಮೇಲೆ ತಂದಿದ್ದರು. ಈಗ ಬನ್ಸಾಲಿ ಇಬ್ಬರನ್ನೂ ಪದ್ಮಾವತಿ ಚಿತ್ರದಲ್ಲಿ ಕೂಡ ಆ ಜಾದುವನ್ನು ತರಲು ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ.

ಸದ್ಯ ಪದ್ಮಾವತಿ ಚಿತ್ರದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯಾಗಿ ರಣವೀರ್ ಸಿಂಗ್, ರಾಣಾ ರಾವಾತ್ ಸಿಂಗ್ ರಾಗಿ ಶಾಹೀದ್ ಕಪೂರ್ ಮತ್ತು ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ. ಸಿನಿಮಾ ಇದೇ ನವೆಂಬರ್ ತಿಂಗಳಲ್ಲಿ ತೆರೆಕಾಣುವ ಸಾಧ್ಯತೆಗಳಿವೆ.