ಕುರಿ ಮಾಂಸದ ಜಾಹೀರಾತಲ್ಲಿ ಗಣೇಶನ ಬಳಕೆ – ಆಸ್ಟ್ರೇಲಿಯಾ ಕಂಪೆನಿ ವಿರುದ್ಧ ಆಕ್ರೋಶ

0
3

ಸಿಡ್ನಿ: ಆಸ್ಟ್ರೇಲಿಯಾದ ಕುರಿ ಮಾಂಸದ ಜಾಹಿರಾತೊಂದರಲ್ಲಿ ಹಿಂದೂ ದೇವರಾದ ಗಣೇಶನನ್ನು ತೋರಿಸಲಾಗಿದ್ದು ಇದರ ವಿರುದ್ಧ ಭಾರತ ಅಧಿಕೃತ ದೂರು ದಾಖಲಿಸಿದೆ.

ಇಂಡಸ್ಟ್ರಿ ಗ್ರೂಪ್ ಮೀಟ್ ಆ್ಯಂಡ್ ಲೈವ್ ಸ್ಟಾಕ್ ಆಸ್ಟ್ರೇಲಿಯಾದ ಈ ಜಾಹಿರಾತಿನಲ್ಲಿ ವಿವಿಧ ಧರ್ಮದ ದೇವರು ಹಾಗೂ ವ್ಯಕ್ತಿಗಳನ್ನ ತೋರಿಸಲಾಗಿದೆ. ಹಿಂದೂ ದೇವರಾದ ಗಣೇಶ, ಜೀಸಸ್, ಬುದ್ಧ ಹಾಗೂ ವೈಜ್ಞಾನಿಕ ಧರ್ಮ(ಸೈಂಟಾಲಜಿ)ಯ ಸಂಸ್ಥಾಪಕ ಎಲ್. ರಾನ್ ಹುಬ್ಬರ್ಡ್ ಒಂದೇ ಮೇಜಿನ ಮೇಲೆ ಕುಳಿತುಕೊಂಡು ಕುರಿ ಮಾಂಸದ ಊಟ ಮಾಡುತ್ತಿದ್ದು, ಅದನ್ನ ಹೊಗಳುತ್ತಿರುವಂತೆ ತೋರಿಸಲಾಗಿದೆ.

ಇದಕ್ಕೆ ಆಸ್ಟ್ರೇಲಿಯಾದ ಭಾರತ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ವಿಷಯವನ್ನ ಆಸ್ಟ್ರೇಲಿಯಾ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಕ್ಯಾನ್‍ಬೆರಾದ ಭಾರತೀಯ ಹೈ ಕಮಿಷನ್ ತಿಳಿಸಿದೆ.

ಜಾಹಿರಾತಿನಲ್ಲಿ ಹಿಂದೂ ದೇವರಾದ ಗಣೇಶ ಕುರಿ ಮಾಂಸವನ್ನು ಹೊಗುಳುವಂತೆ ತೋರಿಸಿರುವುದು ಭಾರತೀಯರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಶನಿವಾರದಂದು ಹೈ ಕಮಿಷನ್ ಹೇಳಿಕೆ ನೀಡಿದೆ. ಸಿಡ್ನಿಯ ಭಾರತೀಯ ಕಾನ್ಸುಲೇಟ್ ಈ ಬಗ್ಗೆ ನೇರವಾಗಿ ಮೀಟ್ ಅಂಡ್ ಲೈವ್‍ಸ್ಟಾಕ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದು, ಜಾಹಿರಾತನ್ನು ಹಿಂಪಡೆಯುವಂತೆ ಕೇಳಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಮುದಾಯಿಕ ಗುಂಪುಗಳನ್ನ ಭೇಟಿ ಮಾಡುತ್ತಿರುವುದಾಗಿ ಇಂಡಸ್ಟ್ರಿ ಗ್ರೂಪ್ ತಿಳಿಸಿದೆ. ಜಾಹಿರಾತು ನಿರ್ಮಾಣ ಮಾಡುವಾಗ ತೀವ್ರ ಸಂಶೋಧನೆ ಹಾಗೂ ಸಮಾಲೋಚನೆ ನಡೆಸಲಾಗಿದೆ. ಏಕತೆಯನ್ನು ತೋರಿಸುವ ಉದ್ದೇಶದಿಂದ ಈ ಜಾಹಿರಾತು ಮಾಡಲಾಗಿದೆಯೇ ಹೊರತು ಅವಹೇಳನ ಮಾಡುವ ಉದ್ದೇಶವಿಲ್ಲ ಎಂದು ಹೇಳಿದೆ.