ರಜನಿ, ಅಕ್ಷಯ್ ಕುಮಾರ್ 2.0 ಕಮಾಲ್ 3ಡಿಯಲ್ಲಿ ನೋಡಿ

ಬೆಂಗಳೂರು: ಭಾರತೀಯ ಸಿನಿ ರಸಿಕರು ಕಾತುರದಿಂದ ಕಾಯುತ್ತಿರುವ ರೋಬೋ 2.0 ಸಿನಿಮಾದ ಮತ್ತೊಂದು ಮೇಕಿಗ್ ವಿಡಿಯೋ ರಿಲೀಸ್ ಆಗಿದ್ದು, ಸಿನಿಮಾ ಹೇಗೆ ನಿರ್ಮಾಣವಾಗಿದೆ ಎಂಬುದನ್ನು ನೋಡಬಹುದಾಗಿದೆ.

ಎಂದಿರನ್ (ರೋಬೋಟ್) ಮುಂದುವರೆದ ಭಾಗ ಇದಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಕೆಲವು ತಿಂಗಳು ಹಿಂದೆ ರಜನೀಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಸಿನಿಮಾಗಾಗಿ ರೆಡಿಯಾಗುವ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

ಇನ್ನೂ ಈ ಮೇಕಿಂಗ್ ವಿಡಿಯೋದಲ್ಲಿ ಎಲ್ಲ ತಂತ್ರಜ್ಞರು, ನಟರು ತಮ್ಮ ಅನುಭವಗಳನ್ನು ನೋಡುಗರೊಂದಿಗೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ಸಹ ಸಿನಿಮಾ ನೋಡಿದ ಮೇಲೆ ಅಭಿಮಾನಿಗಳ ರಿಆ್ಯಕ್ಷನ್ ಕೇಳಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ. ಸಿನಿಮಾದಲ್ಲಿ ಅತಿ 3ಡಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಸಿನಿಮಾದ ಬಳಿಕ ಭಾರತೀಯ ಸಿನಿಮಾ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಚಿತ್ರತಂಡ ಹೇಳಿದೆ.

2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಸಿನಿಮಾ ತೆಲಗು ಮತ್ತು ಹಿಂದಿಯಲ್ಲಿ ಮೂಡಿಬರಲಿದೆ.

2010ರಲ್ಲಿ ರೋಬೋಟ್ ಸಿನಿಮಾ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಸಿನಿಮಾ ಕೋಟಿ ಕೋಟಿ ಹಣ ಬಾಚಿತ್ತು. ಸುಮಾರು ಎರಡು ವರ್ಷಗಳ ಚಿತ್ರೀಕರಣದ ನಂತರ ತೆರೆ ಕಂಡಿದ್ದ ಅದು ರಜನಿ ವೃತ್ತಿ ಬದುಕಿಗೆ ಹೊಸ ಇಮೇಜ್ ನೀಡಿತ್ತು. ಭಾರತೀಯ ಚಿತ್ರರಂಗದಲ್ಲೂ ಹಾಲಿವುಡ್ ಲೆವೆಲ್ ನ ಸಿನಿಮಾ ಮಾಡುವ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು ಇದ್ದಾರೆಂದು ಹೇಳಿತ್ತು.