ಅಬ್ಬಬ್ಬಾ ಸೆಕೆ! – ಏನ್ಮಾಡ್ಬೇಕು ಕೂಲ್ ಆಗೋಕೆ?

ಅಬ್ಬಬ್ಬಾ ಈ ಸೆಕೆ ತಡ್ಕೊಳ್ಳೋಕಾಗ್ತಿಲ್ಲ. ಏನ್ ಬಿಸಿಲಪ್ಪಾ ಇದು. ಓ ವರುಣ ದೇವಾ ಕೃಪೆ ತೋರೋ ಎಂದು ಎಲ್ಲರೂ ಅಂದ್ಕೊಂಡಿರ್ತಾರೆ. ಇಷ್ಟು ದಿನ ಸೂರ್ಯ ನೆತ್ತಿ ಮೇಲೆ ಬಂದರೂ ಬೆವರಿಳಿಯದ ಬೆಂಗಳೂರಲ್ಲಿ ಈಗ ಬೆಳಗ್ಗೆ 9 ಗಂಟೆಗೆ ಬೆವರು ಸುರಿಯುತ್ತಿರುತ್ತದೆ. ಏನ್ ಮಾಡಿದ್ರೂ ಸೆಕೆ ಕಡಿಮೆಯಾಗ್ತಿಲ್ಲ. ಹಾಗಂತ ಆಫೀಸ್, ಸ್ಕೂಲ್, ಮದುವೆ, ನಾಮಕರಣ ಇತ್ಯಾಧಿ ಕಾರ್ಯಕ್ರಮಗಳಿಗೆ ಹೋಗದೇ ಇರೋಕಾಗುತ್ತಾ. ಅದಕ್ಕೆಂದೇ ನಾವಿಲ್ಲಿ ಈಗಿನ ಸೆಕೆಗೆ ಹೇಗಿರಬೇಕು ಅಂತಾ ಹೇಳ್ತೀವಿ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು ಅಂದ್ರೆ ನಮ್ಮ ಆಹಾರ, ಉಡುಗೆ- ತೊಡುಗೆಯೂ ಬದಲಾಗಬೇಕು. ಬೇಸಿಗೆಯಲ್ಲಿ ಕೂಲ್ ಆಗಿರಲು ಯಾವ ರೀತಿ ಉಡುಪು ಧರಿಸಬೇಕು ಅನ್ನೋದಕ್ಕೆ ಇಲ್ಲಿದೆ ಟಿಪ್ಸ್:

1. ಸಡಿಲವಾದ ಉಡುಪು ಧರಿಸಿ: ಬೇಸಿಗೆಯಲ್ಲಿ ಉಡುಪು ಸಡಿಲವಾಗಿದ್ದಷ್ಟೂ ನೀವು ಆರಾಮಾಗಿ ಇರಬಹುದು. ಬಿಗಿಯಾದ ಉಡುಪು ತೊಡುವುದರಿಂದ ಸೆಕೆ ಉಂಟಾಗಿ ದೇಹ ಹೆಚ್ಚು ಬೆವರುತ್ತದೆ. ಹೀಗಾಗಿ ಸಡಿಲವಾದ ಬಟ್ಟೆ ತೊಟ್ಟರೆ ಕೂಲ್ ಆಗಿ ಇರಬಹುದು. ಸ್ಲೀವ್‍ಲೆಸ್ ಧರಿಸಿ ಹೊರಗೆ ಸುತ್ತಾಡಿದ್ರೆ ಮೈ ಕೈ ಟ್ಯಾನ್ ಆಗುತ್ತದೆ. ಹೀಗಾಗಿ ಹೊರಗೆ ಓಡಾಡುವಾಗ ಫುಲ್ ಸ್ಲೀವ್ಸ್ ಇರೋ ಬಟ್ಟೆ ಧರಿಸಿದ್ರೆ ಒಳ್ಳೆಯದು. ಟೈಟ್ ಟೀ ಶರ್ಟ್ ಮತ್ತು ಟೈಟ್ ಜೀನ್ಸ್ ತೊಡುವುದರ ಬದಲು ಆರಾಮಾದ ಕುರ್ತಾ, ಧೋತಿ ಪ್ಯಾಂಟ್ ಧರಿಸಿ.


2. ಕಾಟನ್ ಬಟ್ಟೆಗಳನ್ನ ಧರಿಸಿ: ಪಾಲಿಸ್ಟರ್ ಮತ್ತು ರೇಯಾನ್ ಬಟ್ಟೆಗಿಂತ ಕಾಟನ್ ಉಡುಪುಗಳು ಬೇಸಿಗೆಗೆ ಸೂಕ್ತ. ಕಾಟನ್ ಬಟ್ಟೆ ಬೆವರನ್ನು ಬೇಗನೆ ಹೀರುತ್ತದೆ ಹಾಗೂ ಬೇಗನ ಒಣಗುತ್ತದೆ. ಆದ್ದರಿಂದ ಕಾಟನ್ ಬಟ್ಟೆಗಳಿಗೇ ನಿಮ್ಮ ಆದ್ಯತೆ ಇರಲಿ.

3. ಬಟ್ಟೆ ಸ್ವಚ್ಛವಾಗಿಟ್ಟುಕೊಳ್ಳಿ: ಬೇಸಿಗೆಯಲ್ಲಿ ದೇಹದಲ್ಲಿ ಹೆಚ್ಚು ಬೆವರು ಬರೋದ್ರಿಂದ ಕುತ್ತಿಗೆ ಹಾಗೂ ತೋಳಿನ ಭಾಗಗಳಲ್ಲಿ ಕಲೆಗಳಾಗುತ್ತವೆ. ಹಾಗೂ ಬಟ್ಟೆಯನ್ನ ಒಂದು ಬಾರಿ ತೊಟ್ಟು ಒಗೆಯದೇ ಹಾಗೇ ಧರಿಸಿದ್ರೆ ದುರ್ವಾಸನೆ ಬರುತ್ತದೆ. ಆದ್ದರಿಂದ ಒಂದು ಬಾರಿ ಧರಿಸಿದ ಉಡುಪನ್ನು ಶುಭ್ರವಾಗಿ ಒಗೆದ ನಂತರವೇ ಮತ್ತೊಮ್ಮೆ ಧರಿಸಿ. ಇಲ್ಲಾಂದ್ರೆ ನಿಮ್ ಹತ್ರ ಬಂದವರು ಮೂಗು ಮುಚ್ಕೊಂಡು ಇರಬೇಕಾಗುತ್ತದೆ.


4. ಬೀಡಿಂಗ್ ಹಾಗೂ ಮೆಟಲ್ ವರ್ಕ್ ಇರುವಂತಹ ಬಟ್ಟೆಗಳನ್ನ ದೂರವಿಡಿ: ಚಂದದ ಕಸೂತಿ ಮಾಡಿರುವ ಉಡುಪು ಧರಿಸಿದ್ರೆ ಗ್ರ್ಯಾಂಡ್ ಆಗಿ ಕಾಣ್ತೀರಿ ನಿಜ. ಆದ್ರೆ ಬೇಸಿಗೆಯಲ್ಲಿ ಇಂತಹ ಉಡುಪುಗಳನ್ನ ಸಾಧ್ಯವಾದಷ್ಟು ಧರಿಸಬೇಡಿ. ಬಟ್ಟೆಯ ಜೊತೆಗೆ ಮಣಿ, ಬೀಡಿಂಗ್ ಮತ್ತು ಮೆಟಲ್ ವರ್ಕ್ ಇದ್ದರೆ ಅದರ ತೂಕವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ವರ್ಕ್ ಮಾಡಿದ ಉಡುಪು ಮೈಗೆ ಚುಚ್ಚುವುದಲ್ಲದೆ ಹೆಚ್ಚು ಬೆವರುವಂತೆ ಮಾಡುತ್ತದೆ.

5. ಹೊರಗೆ ಸುತ್ತಡುವಾಗ ಹ್ಯಾಟ್, ಸ್ಕಾರ್ಫ್ ಮತ್ತು ಸನ್‍ಗ್ಲಾಸ್ ಜೊತೆಯಲ್ಲಿರಲಿ: ಹೊರಗೆ ಸುತ್ತಲು ಹೋದಾಗ ಸ್ಕಾರ್ಫ್, ಸನ್‍ಗ್ಲಾಸ್ ಮತ್ತು ಟೋಪಿಯನ್ನು ಬಳಸಿ. ಮನೆಯಿಂದ ಹೊರಡುವ ಮುನ್ನ ಸನ್‍ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಲು ಮರೆಯಬೇಡಿ. ಅಂಗಡಿಗೆ ಅಥವಾ ಇಲ್ಲೇ ಸ್ವಲ್ಪ ದೂರ ಹೋಗಿ ಬರುವಿರಾದ್ರೆ ಛತ್ರಿ ಬಳಸಿ ನಿಮ್ಮ ತ್ವಚೆ ಟ್ಯಾನ್ ಆಗದಂತೆ ಮುನ್ನೆಚ್ಚರಿಕೆ ವಹಿಸಿ.


6. ಲೈನಿಂಗ್ ಇಲ್ಲದ ಉಡುಪು ಧರಿಸಿ: ಟಾಪ್, ಕೋಟ್ ಅಥವಾ ಸ್ಕರ್ಟ್‍ಗಳಲ್ಲಿ ಲೈನಿಂಗ್ ಇದೆ ಎಂದರೆ ನೀವು ಎರಡು ಪದರದ ಬಟ್ಟೆಯನ್ನು ಧರಿಸಿರ್ತೀರ. ಅದರಿಂದ ಹೆಚ್ಚು ಬೆವರುತ್ತೀರ. ಹೀಗಾಗಿ ಲೈನಿಂಗ್ ಇಲ್ಲದಂತಹ ಬಟ್ಟೆಯನ್ನ ಧರಿಸಿ. ಕಾಟನ್ ಉಡುಪುಗಳು ಬೇಸಿಗೆಗೆ ಹೇಳಿ ಮಾಡಿಸಿದ್ದು.

7. ತಿಳಿ ಬಣ್ಣದ ಉಡುಪನ್ನೇ ಆಯ್ಕೆ ಮಾಡಿಕೊಳ್ಳಿ: ಗಾಢ ಬಣ್ಣದ ಉಡುಪುಗಳು ಬಿಸಿಲನ್ನ ಹೆಚ್ಚು ಹೀರಿಕೊಳ್ಳುತ್ತವೆ. ಕಪ್ಪು ಬಣ್ಣದ ಉಡುಪು ಬಿಸಿಲನ್ನ ಹೀರಿಕೊಂಡು ಹೊರಹೋಗಲು ಬಿಡುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚಾಗಿ ತಿಳಿ ಬಣ್ಣದ ಉಡುಪುಗಳನ್ನೇ ಧರಿಸಿ. ಬಿಳಿ ಬಣ್ಣದ ಉಡುಪು ಹೆಚ್ಚು ಬಿಸಿಲನ್ನ ಹೀರಿಕೊಳ್ಳುವುದಿಲ್ಲ. ಹೀಗಾಗಿ ಬಿಳಿ, ತಿಳಿ ಗುಲಾಬಿ, ತಿಳಿ ಹಳದಿಯಂತಹ ಬಣ್ಣಗಳ ಉಡುಪನ್ನ ಧರಿಸಿ.

8. ಆಭರಣಗಳನ್ನ ಆದಷ್ಟೂ ಕಡಿಮೆ ತೊಟ್ಟುಕೊಳ್ಳಿ: ಬೇಸಿಗೆಯಲ್ಲಿ ಹೆಚ್ಚು ಬೆವರೋದ್ರಿಂದ ಹೆಚ್ಚಾಗಿ ಆಭರಣ ತೊಟ್ಟುಕೊಂಡರೆ ಮತ್ತೆ ಕಿರಿಕಿರಿಯಾಗುತ್ತದೆ. ಹೀಗಾಗಿ ಆಭರಣಗಳನ್ನು ಸಾಧ್ಯವಾದಷ್ಟು ಕಡಿಮೆ ತೊಟ್ಟುಕೊಳ್ಳಿ. ಲೈಟ್ ಆಗಿದ್ದಷ್ಟೂ ನೀವು ಕೂಲ್ ಆಗಿರಬಹುದು ಅನ್ನೋದನ್ನ ಮರೆಯಬೇಡಿ.

No Comments Yet

Leave a Reply

Your email address will not be published.