ಟೀಂ ಇಂಡಿಯಾ ಸೋತಿದ್ದಕ್ಕೆ ಆಸೀಸ್ ತಂಡದ ಬಸ್ ಮೇಲೆ ಕಲ್ಲು ತೂರಾಟ!

ಗುವಾಹಟಿ: ಟೀಂ ಇಂಡಿಯಾವನ್ನು ಸೋಲಿಸಿದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.

ಮಂಗಳವಾರದಂದು ಭಾರತದ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಜಯ ಸಾಧಿಸಿದ ಬಳಿಕ ಆಸೀಸ್ ಪಡೆ ಹೋಟೆಲ್ ಗೆ ಹೋಗುವ ವೇಳೆಯಲ್ಲಿ ಅವರ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.

ಆಸ್ಟ್ರೇಲಿಯಾದ ಎಲ್ಲ ಕ್ರಿಕೆಟಿಗರು ಬರ್ಸಪಾರ ಸ್ಟೇಡಿಯಂ ನಿಂದ ಹೋಟೆಲ್ ನತ್ತ ತಮ್ಮ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬಸ್ ಮೇಲೆ ಕಲ್ಲು ಎಸೆಯಲಾಗಿದ್ದು, ಬಸ್ ನ ಕಿಟಕಿಯ ಗಾಜು ಒಡೆದು ಹೋಗಿದೆ. ಘಟನೆಯಲ್ಲಿ ಯಾವುದೇ ಆಟಗಾರರಿಗೂ ಗಾಯವಾಗಿಲ್ಲ. ಕಲ್ಲು ಬಿದ್ದಾಗ ಒಂದು ಕ್ಷಣ ಎಲ್ಲರೂ ವಿಚಲಿತರಾದ್ರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಪಂದ್ಯದ ಬಳಿಕ ಬಸ್‍ನ ಕಿಟಕಿಗೆ ಕಲ್ಲು ಎಸೆದಿದ್ದು ನಿಜಕ್ಕೂ ಭಯ ತರಿಸುವಂತಿತ್ತು ಎಂದು ಬ್ಯಾಟ್ಸ್‍ಮನ್ ಅರೋನ್ ಫಿಂಚ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ರೀತಿ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ಕಲ್ಲು ಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಚಿತ್ತಗಾಂಗ್ ನಲ್ಲಿ ಆಸ್ಟ್ರೇಲಿಯಾ ಆಟಗಾರರು ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಜಯಿಸಿ ಹೋಟೆಲ್ ನತ್ತ ತೆರಳುವಾಗ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು.

ಎರಡನೇ ಟಿ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಟ್ಟುಕೊಂಡಿದೆ. ಮೊದಲ ಪಂದ್ಯಕ್ಕೆ ಮಳೆ ಬಂದ ಕಾರಣ ಡಕ್‍ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಗಳಿಸಿದ್ದು, ಮೂರನೇ ಟಿ20 ಶುಕ್ರವಾರ ಹೈದರಾಬಾದ್ ನಲ್ಲಿ ನಡೆಯಲಿದೆ. ಈ ಪಂದ್ಯವನ್ನು ಯಾರು ಗೆಲ್ಲುತ್ತಾರೋ ಸರಣಿ ಅವರ ಕೈ ವಶವಾಗಲಿದೆ.