ಕಳೆದ 3 ತಿಂಗಳಿಂದ ನಿತ್ಯ ಈ ಊರವರಿಗೆ ಹಾವು ಕಚ್ತಿದ್ಯಂತೆ..!

0
7

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ ಜನ ಹಾವಿನ ಕಾಟದಿಂದ ಹೈರಾಣವಾಗಿದ್ದಾರೆ.

ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟವಿದ್ದು ಸರಿ ಸುಮಾರು ಐದು ಸಾವಿರ ಜನ ಇಲ್ಲಿ ವಾಸ ಮಾಡ್ತಿದ್ದಾರೆ. ಆದ್ರೆ 3 ತಿಂಗಳಿನಿಂದ ಈ ಗ್ರಾಮದ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಬೆಳಗಾಗ್ತಿದ್ದಂತೆ ಗ್ರಾಮದಲ್ಲಿ ಒಬ್ಬರಲ್ಲ ಒಬ್ಬರಿಗೆ ಹಾವು ಕಚ್ಚಿದೆ ಅನ್ನೋ ಸುದ್ದಿ ಕಿವಿಗೆ ಬೀಳುತ್ತೆ. ಕೆಲವರಂತೂ ರಾತ್ರಿಯಿಡೀ ಕೈಯಲ್ಲಿ ಕೋಲು ಹಿಡ್ಕೊಂಡು ಹಾವನ್ನ ಕಾಯೋ ಕೆಲಸ ಮಾಡಿಕೊಂಡಿದ್ದಾರೆ.

ಕರಿನಾಗರ ಹಾವು ಕಚ್ಚಿ ಈಗಾಗಲೇ ಐವರು ಸಾವನ್ನಪ್ಪಿದ್ದು, 17 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಇಂದು ಸಹ ಇಬ್ಬರಿಗೆ ನಾಗರಹಾವು ಕಚ್ಚಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ.

ಸುತ್ತಮುತ್ತಲಿನ ಗ್ರಾಮದಲ್ಲಿರುವ 51 ದೇವರಿಗೆ ಪೂಜೆ, ಪುನಸ್ಕಾರ, ಹೋಮ ಹವನ, ಮಾಟ ಮಂತ್ರ ಎಲ್ಲವನ್ನೂ ಮಾಡಿಸಿದ್ದಾರೆ. ಪ್ರತಿ ಮನೆಗೂ ನೂರು ರೂಪಾಯಿ ಹಣ ಪಡೆದು ಗ್ರಾಮ ದೇವತೆಗೆ ಶಾಂತಿ ಪೂಜೆ, ನಾಗದೇವತೆಗೆ ಬಲಿದಾನ ನೀಡಿದ್ದಾರೆ. ಇಷ್ಟಾದ್ರೂ ಹಾವಿನ ಕಾಟ ತಪ್ಪುತ್ತಿಲ್ಲ. ರಾತ್ರಿ ಮನೆಯಲ್ಲಿ ಮಲಗಿದ ಸಮಯದಲ್ಲಿ ಕಿವಿಗೆ, ಗಂಟಲಿಗೆ ಹೆಚ್ಚಾಗಿ ಹಾವು ಕಚ್ಚಿದೆ. ಕೆಲವರಂತೂ ಹಾವಿನ ಭಯದಿಂದ ಊರನ್ನೇ ತ್ಯಜಿಸಿದ್ದಾರೆ.

ಗ್ರಾಮದಲ್ಲಿ ಕಣ್ಣಿಗೆ ಬಿದ್ದ ಹಾವು ನೋಡ ನೋಡ್ತಿದ್ದಂತೆ ಮಾಯವಾಗ್ತಿವೆಯಂತೆ. ಬೆಡ್‍ರೂಂ, ಬಾತ್‍ರೂಂ ಸೇರಿದಂತೆ ಎಲ್ಲಾ ಕಡೆನೂ ಹಾವುಗಳದ್ದೇ ಭಯ. ಇದನ್ನೆ ಬಂಡವಾಳ ಮಾಡಿಕೊಂಡ ಮಾಂತ್ರಿಕರು ಜನರಿಂದ ಹಣ ಕೀಳ್ತಿದ್ದಾರೆ.