ಸಲ್ಲೂ ಮಿಯಾ ಜೊತೆ ನಟಿಸಲ್ಲ ಅಂದಿದ್ರಂತೆ ಇಲಿಯಾನಾ!

0
4

ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆ ನಟಿಸಲು ನಟಿಯರು ಕನಸು ಕಾಣ್ತಾರೆ. ಬಾಲಿವುಡ್‍ನಲ್ಲಿ ತಮ್ಮ ಮೊದಲ ಚಿತ್ರದಲ್ಲಿ ಸಲ್ಮಾನ್ ಖಾನ್‍ರೊಂದಿಗೆ ನಾಯಕಿಯಾಗಿ ನಟಿಸಿ ಸಾಕಷ್ಟು ನಟಿಯರು ಯಶಸ್ವಿಯಾಗಿದ್ದಾರೆ. ಆದ್ರೆ ದಕ್ಷಿಣದ ನಟಿ ಇಲಿಯಾನಾ ಡಿ ಕ್ರೂಝ್ ಸಲ್ಮಾನ್ ಖಾನ್‍ರೊಂದಿಗೆ ಚಿತ್ರವೊಂದರಲ್ಲಿ ನಟಿಸಲು ನಿರಾಕರಿಸಿದ್ದರಂತೆ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಅದಾಗಲೇ ಹೆಸರು ಮಾಡಿದ್ದ ಇಲಿಯಾನಾ 2009ರ ವಾಂಟೆಡ್ ಚಿತ್ರದಲ್ಲಿ ಸಲ್ಮಾನ್‍ ರೊಂದಿಗೆ ನಟಿಸಲು ನಿರಾಕರಿಸಿದ್ದರು ಎಂದು ತಿಳಿದುಬಂದಿದೆ.

ತೆಲುಗಿನ ಪೋಕಿರಿ ಸಿನಿಮಾದಲ್ಲಿ ಇಲಿಯಾನಾ ನಾಯಕಿಯಾಗಿ ಕಾಣಿಸಿಕೊಂಡಿದ್ರು. ಈ ಚಿತ್ರದ ಹಿಂದಿ ರೀಮೇಕ್ ಆದ ವಾಂಟೆಡ್ ಚಿತ್ರದಲ್ಲೂ ಇಲಿಯಾನಾರನ್ನೇ ನಾಯಕಿಯಾಗಿಸಬೇಕು ಎಂದು ಚಿತ್ರ ನಿರ್ಮಾಪಕರು ಅಂದುಕೊಂಡಿದ್ರು.

ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಇಲಿಯಾನಾ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ. ನನ್ನದೇ ಚಿತ್ರದ ರೀಮೇಕ್ ಆದ ವಾಂಟೆಡ್ ಚಿತ್ರದಲ್ಲಿ ಸಲ್ಮಾನ್ ಖಾನ್‍ರೊಂದಿಗೆ ನಟಿಸಲು ಅವಕಾಶ ಸಿಕ್ಕಿತ್ತು. ನನಗೂ ಆ ಚಿತ್ರದಲ್ಲಿ ನಟಿಸಲು ಇಷ್ಟವಿತ್ತು. ಬಾಲಿವುಡ್‍ನಲ್ಲಿ ನನ್ನ ಮೊದಲ ಸಿನಿಮಾ ಸಲ್ಮಾನ್ ಖಾನ್‍ರೊಂದಿಗೆ ಆಗಿರುತ್ತದೆ ಎಂದು ಖುಷಿಯಾಗಿದ್ದೆ ಅಂದ್ರು.

ಹಾಗಾದ್ರೆ ಚಿತ್ರವನ್ನ ನಿರಾಕರಿಸಲು ಕಾರಣವೇನು ಎಂದಾಗ, ನನಗೆ ನೆನಪಿರುವಂತೆ ಆಗ ನನಗೆ ಪರೀಕ್ಷೆಗಳಿತ್ತು. ಆದ್ದರಿಂದ ಬೋನಿ ಕಪೂರ್ ಸರ್ ನನಗೆ ಫೋಟೋಶೂಟ್ ಮಾಡಲು ಕೇಳಿದಾಗ ಕ್ಷಮಿಸಿ ನನಗೆ ಪರೀಕ್ಷೆಗಳಿವೆ, ಸಾಧ್ಯವಿಲ್ಲ ಎಂದಿದ್ದೆ. ಆಗ ನಾನು ಆ ಸಂದರ್ಭವನ್ನು ಸರಿಯಾಗಿ ನಿಭಾಯಿಸಲಿಲ್ಲ. ಆಗ ನನಗೆ ಆ ಆಫರ್‍ ನ ಪ್ರಾಮುಖ್ಯತೆ ಗೊತ್ತಿರಲಿಲ್ಲ. ನನ್ನ ಪರೀಕ್ಷೆ ಮುಗಿಸುವುದಷ್ಟೇ ಬೇಕಾಗಿತ್ತು ಅಂತ ಇಲಿಯಾನಾ ಹೇಳಿದ್ರು. ಆಗ ಇಲಿಯಾನಾ ನಿರಾಕರಿಸಿದ ಪಾತ್ರ ಆಯೆಶಾ ಟಾಕಿಯಾ ಅವರ ಪಾಲಾಯ್ತು. ನಂತರ ನಡೆದಿದ್ದೆಲ್ಲವೂ ಈಗ ಇತಿಹಾಸ.

ಬಳಿಕ ಇಲಿಯಾನಾಗೆ ಬಾಲಿವುಡ್‍ಗೆ ಪಾದಾರ್ಪಣೆ ಮಾಡಲು ಮೂರು ವರ್ಷಗಳೇ ಬೇಕಾಯ್ತು. ಆಕೆ ರಣಬೀರ್ ಕಪೂರ್ ಜೊತೆ ಬರ್ಫಿ ಚಿತ್ರದಲ್ಲಿ ಕಾಣಿಸಿಕೊಂಡ್ರು. ಆದ್ರೆ ಈ ಚಿತ್ರವನ್ನ ಒಪ್ಪಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡೆ. ಒಂದು ಸಂದರ್ಭದಲ್ಲಂತೂ ಚಿತ್ರದಿಂದ ಹೊರಬರಬೇಕು ಎಂದೆನಿಸಿತ್ತು. ಚಿತ್ರಕ್ಕೆ ಸಹಿ ಹಾಕಲು ಮೂರು ತಿಂಗಳು ಬೇಕಾಯ್ತು ಅಂತ ಇಲಿಯಾನಾ ಹೇಳಿದ್ರು.