ಕುರುಕ್ಷೇತ್ರದಲ್ಲಿ ದರ್ಶನ್ ನಾಯಕಿಯಾಗಿ ರಮ್ಯಾ!

0
13

ಬೆಂಗಳೂರು: ಚಂದನವನದ ಬಹುನಿರೀಕ್ಷಿತ ಸಿನಿಮಾ ಮುನಿರತ್ನ ‘ಕುರುಕ್ಷೇತ್ರ’ದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ನಾಯಕಿಯಾಗಿ ಕೇರಳದ ಬೆಡಗಿ ರಮ್ಯಾ ನಂಬೀಸನ್ ಕಾಣಿಸಿಕೊಳ್ಳಲಿದ್ದಾರೆ.

ಹೌದು, ಇದೂವರೆಗೂ ದರ್ಶನ್ ಗೆ ನಾಯಕಿಯಾಗಿ ತೆಲಗುವಿನ ರೆಜಿನಾ ಕ್ಯಾಸಂಡ್ರಾ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಈ ಕುರಿತು ರೆಜಿನಾ ಕೂಡ ತಾವು ಕುರುಕ್ಷೇತ್ರದಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ರೆಜಿನಾ ಸ್ಥಾನಕ್ಕೆ ರಮ್ಯಾ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಮೊನ್ನೆಯಷ್ಟೆ ನೀರ್ ದೋಸೆ ಬೆಡಗಿ ಹರಿಪ್ರಿಯಾ ಕುರುಕ್ಷೇತ್ರದಲ್ಲಿ ದರ್ಶನ್ ಗೆ ಜೊತೆಯಾಗಿ ನಟಿಸಿ ಹೋಗಿದ್ದಾರೆ.

ಸಿನಿಮಾದ ಕುಂತಿ ಪಾತ್ರಕ್ಕಾಗಿ ಹಿರಿಯ ನಟಿ ಲಕ್ಷ್ಮೀ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಲಕ್ಷ್ಮೀ ಖಾಸಗಿ ಚಾನೆಲ್‍ವೊಂದರ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದು, ಹಾಗಾಗಿ ಕುಂತಿ ಪಾತ್ರಕ್ಕೆ ಭಾರತಿ ವಿಷ್ಣುವರ್ಧನ್ ಜೀವ ತುಂಬಲಿದ್ದಾರೆ.

ಈ ಚಿತ್ರಲ್ಲಿ ರೆಬಲ್ ಸ್ಟಾರ್ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್-ಕಿಂಗ್ ಅರ್ಜುನ್ ಸರ್ಜಾ, ಡೈಲಾಗ್ ಕಿಂಗ್ ಸಾಯಿಕುಮಾರ್, ಶಶಿಕುಮಾರ್, ಆರ್ಮುಗಂ ಖ್ಯಾತಿಯ ರವಿಶಂಕರ್, ಶ್ರೀನಿವಾಸ್ ಮೂರ್ತಿ ಹಾಗೂ ಪ್ರಣಯಾ ರಾಜ ಶ್ರೀನಾಥ್ ಕುರುಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಿಪ್ರಿಯಾ, ಪವಿತ್ರಾ ಲೋಕೇಶ್ ಕೂಡ ಈ ‘ಕುರುಕ್ಷೇತ್ರ’ ಚಿತ್ರದಲ್ಲಿ ಕಾಣಿಸಲಿದ್ದಾರೆ.

ಮುನಿರತ್ನ ಅವರ ಕನಸಿನ ಸಿನಿಮಾ ಕುರುಕ್ಷೇತ್ರ ಬರೋಬ್ಬರಿ 50 ರಿಂದ 60ಕೋಟಿ ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಕುರುಕ್ಷೇತ್ರ ಚಿತ್ರವನ್ನು ನಾಗಣ್ಣ ನಿರ್ದೇಶಿಸುತ್ತಿದ್ದಾರೆ. ಈ ಮೊದಲು ದರ್ಶನ್ ಅಭಿನಯದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ನೂತನ ತಂತ್ರಜ್ಞಾನದಲ್ಲಿ ಬಾಹುಬಲಿ ಚಿತ್ರಕ್ಕಾಗಿ ದುಡಿದ ತಂತ್ರಜ್ಞಾನಿಗಳ ಕೈಚಳಕದಲ್ಲಿ ಕನ್ನಡದ ಕುರುಕ್ಷೇತ್ರ ಮೂಡಿ ಬರಲಿದೆ.