3 ದಿನಕ್ಕೆ 1 ಕೋಟಿ ರೂ. ಬಾಚಿದ ರಾಜಹಂಸ..!

0
3

ಬೆಂಗಳೂರು: ಕಳೆದ ಶುಕ್ರವಾರ ಬಿಡುಗಡೆಗೊಂಡ ಹೊಸಬರ ಚಿತ್ರ ‘ರಾಜಹಂಸ’ಗೆ ಪ್ರೇಕ್ಷಕ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡು ಮುನ್ನಗ್ಗುತ್ತಿದೆ. ಈಗಾಗಲೇ ಕೇವಲ ಮೂರು ದಿನಗಳಲ್ಲಿ ಸಿನಿಮಾ 1 ಕೋಟಿ ರೂ. ಹಣವನ್ನು ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ರವಿವಾರದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ಮೂಲಕ ಸಿನಿಮಾ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ತಮ್ಮ ಅಭಿಮಾನಿ ಬಳಗವನ್ನು ಸೆಳೆಯುವಲ್ಲಿ ಸಫಲರಾಗಿದ್ದಾರೆ. ಧಾರವಾಹಿ ಮೂಲಕವೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಚಿತ್ರದ ಗೆಲುವಿಗೆ ಕಾರಣವೆಂದು ಎಂದು ಹೇಳಬಹುದಾಗಿದೆ.

ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆರೆ ಕಂಡಿರುವ ರಾಜಹಂಸ ಚಲನ ಚಿತ್ರ ಬಾಡಿಗೆ ಸೇರಿ ಒಟ್ಟು 2.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಹೊಸಬರ ಚಿತ್ರವಾದ ನಮ್ಮನ್ನು ಅಭಿಮಾನಿಗಳು ಮೆಚ್ಚಿದ್ದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.

ಇನ್ನೂ ಸಿನಿಮಾದಲ್ಲಿ ರಂಜಿನಿ (ಹಂಸಾಕ್ಷಿ)ಗೆ ಜೊತೆಯಾಗಿ ಗೌರಿಶಿಕರ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶ್ರೀಧರ್, ಬಿ.ಸಿ.ಪಾಟೀಲ್, ಯಮುನಾ, ತಬಲಾ ನಾಣಿ, ವಿಜಯ್ ಚಂಡೂರ್, ಬುಲೆಟ್ ಪ್ರಕಾಶ್ ಸೇರಿದಂತೆ 70ಕ್ಕೂ ಹೆಚ್ಚು ಕಲಾವಿದರು ನಟಿಸಿದ್ದಾರೆ. ನಾಯಕನ ತಂದೆಯಾಗಿ ನಟ ಶ್ರೀಧರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ.

ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಈಗಾಗಲೇ ಹಾಡುಗಳು ಎಲ್ಲರ ಮನದಲ್ಲಿ ಗುನುಗುಟ್ಟುತ್ತಿವೆ. ಬಾರಮ್ಮ ಬಾರಮ್ಮ ಭಾರತಿ, ಮುಲಾ ಮುಲಾ ಸೇರಿದಂತೆ ಎಲ್ಲ ಹಾಡುಗಳು ಸಿನಿರಸಿಕರ ಮನ ಸೆಳೆಯುತ್ತಿದ್ದು, ಯುಟ್ಯೂಬ್ ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿವೆ. ರಘು ದೀಕ್ಷಿತ್ ಹಾಡಿರುವ ಹಾಡನ್ನು ಉತ್ತರ ಭಾರತದ ಒಟ್ಟು 8 ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಬಾರಮ್ಮ ಬಾರಮ್ಮ ಹಾಡು ಚಂದನ್ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದೆ.