ಅಪ್ರಾಪ್ತೆಯ ಗ್ಯಾಂಗ್‍ರೇಪ್- ವಿಡಿಯೋ ಮಾಡಿ 2000 ರೂ.ಗೆ ಬ್ಲ್ಯಾಕ್ ಮೇಲ್

0
3

ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿ ಮೇಲೆ ಐವರು ಯುವಕರು ಸೇರಿಕೊಂಡು ಅತ್ಯಾಚಾರ ಮಾಡಿರುವ ಘಟನೆ ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚಂದನ್(19), ಮನು(18), ದರ್ಶನ್(19) ಹಾಗೂ ಇಬ್ಬರು ಅಪ್ರಾಪ್ತರು ಸೇರಿಕೊಂಡು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿಯನ್ನು ಫೋನ್ ಕೊಡುವ ಮೂಲಕ ಪುಸಲಾಯಿಸಿಕೊಂಡು ನಗರದ ರತ್ನಗಿರಿ ಬಡಾವಣೆಯಲ್ಲಿರುವ ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿ ರೇಪ್ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಅತ್ಯಾಚಾರ ಮಾಡಿದ್ದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಕಾಮುಕರಿಂದ ತಪ್ಪಿಸಿಕೊಂಡ ಬಾಲಕಿ ಮರ್ಯಾದೆಗೆ ಅಂಜಿ ಮನೆಯಲ್ಲಿ ಯಾರಿಗೂ ಈ ವಿಷಯವನ್ನ ಹೇಳಿರಲಿಲ್ಲ. ಮಾರನೇ ದಿನ ಅಪ್ರಾಪ್ತ ಬಾಲಕರಿಬ್ಬರು 2000 ರೂ. ಹಣ ಕೊಡು. ಇಲ್ಲವಾದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್‍ಲೋಡ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಇದೇ ಬೆದರಿಕೆಯೊನ್ನೊಡ್ಡಿ ಬಾಲಕಿಯನ್ನು ಕರೆಸಿಕೊಂಡ ಅಪ್ರಾಪ್ತ ಬಾಲಕರು ಎರಡನೇ ಬಾರಿ ಅತ್ಯಾಚಾರ ಮಾಡಿದ್ದಾರೆ. ಎರಡನೇ ಬಾರಿಯೂ ಅತ್ಯಾಚಾರದ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಕೊನೆಗೆ ಬಾಲಕಿ ವಿಷಯವನ್ನು ಪೋಷಕರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.