ಎಂದೋ ಕಳೆದು ಹೋಗಲಿದ್ದವಳ ಆಂತರ್ಯವನರಿತು ಭರವಸೆಯ ಬೆಳಕು ನೀಡಿದವನು ನೀನು..!

0
20

ಪ್ರೀತಿಯ ಹುಡುಗಾ,

ಒಂದು ಪ್ರೇಮ ಪತ್ರ ಈ ಪರಿ ಮನವ ಕಾಡುತ್ತಾ…? ಈ ರೀತಿ ಭಾವನೆಗಳ ಭಾಷೆ ನಿನಗೆ ಕಲಿಸಿಕೊಟ್ಟವರು ಯಾರು? ನೀ ಬರೆದ ಪತ್ರಗಳಿಗೆ ಉತ್ತರ ಬರೆಯೋಣ ಎಂದು ಹೊರಟರೆ ನಿನ್ನ ಭಾವಗಳ ಮುಂದೆ ಲೇಖನಿ ಸಾಗುವುದೇ ಇಲ್ಲ!

ಪ್ರತಿನಿತ್ಯ ವಾಟ್ಸಪ್, ಹೈಕ್, ಎಫ್‍ಬಿ, ಸ್ಮಾರ್ಟ್ ಫೋನ್ ಒಡನಾಟ ಇದ್ದರೂ ನೀನು ಅನಿರೀಕ್ಷಿತವಾಗಿ ಬರೆವ ಪತ್ರಗಳು ಅಷ್ಟರ ಮಟ್ಟಿಗೆ ಆಪ್ತವಾಗುತ್ತವೆ. ಅಲ್ಲಿರುವ ನವಿರು ಭಾವಗಳು ಮನಕೆ ಆಹ್ಲಾದ ನೀಡುತ್ತವೆ.

ಮೊನ್ನೆ ಪರೀಕ್ಷೆ ಮುಗಿಯಿತು ನೋಡು. ಅದು ಕಳೆದ ಎರಡನೇ ದಿನದ ಮುಂಜಾವದಲಿ ಅಪ್ಪ ಅಮ್ಮನ ಕಿವಿಯಲ್ಲಿ ಏನೋ ಉಸುರುತ್ತಿದ್ದ. ಹೇಳುವ ರೀತಿಯನ್ನು ನೋಡಿಯೇ ಅರ್ಥೈಸಿಕೊಂಡೆ ಇದು ಹೆಣ್ಣು ಹುಟ್ಟಿದವರ ಪಾಡು ಅಂತಾ.!

ಸಂಜೆ ಕಾಫಿ ಕುಡಿದ ತಕ್ಷಣ, ಬಾರೇ ವಾಕಿಂಗ್ ಮಾಡ್ಕೊಂಡು ಬರೋಣ ಹೋಗಿ ಬರೋಣ ಎಂದು ಅಮ್ಮ ಕರೆದಳು ನೋಡು, ಆಗಲೇ ಮನಸ್ಸು ಗಟ್ಟಿಯಾಗಿ ಹೇಳಿತ್ತುಬಿಟ್ಟಿತ್ತು ಇದು ಮದುವೆಗೆ ಸಿದ್ಧಳಾಗು ಎನ್ನುವುದರ ಮುನ್ನುಡಿ ಎಂದು. ಹಾಗೇ ನಡೆಯಬೇಕಾದರೆ ಅಪ್ಪನ ಮಾತನ್ನು ಯಥಾವತ್ತಾಗಿ ಕಿವಿಯಲ್ಲಿ ಉಸುರಿದ್ದಳು. ಹುಡುಗ ದೂರದ ಸಂಬಂಧಿಯ ನೆಂಟನ ಮಗನಂತೆ. ಓಡಾಡಲು ಕಾರು, ಜೀವನಕ್ಕೆ ಐಷಾರಾಮಿ ಮನೆ, ಕಾಲಿಗೊಬ್ಬ ಕೈಗೊಬ್ಬ ಆಳು… ನಾ ಒಪ್ಪಿದರೆ ಆ ಮನೆಗೆ ಯಜಮಾನತಿಯಂತೆ. ಹೀಗೆ ಅವಳು ಹೇಳುತ್ತಾ ಹೋದಳು, ನಾನು ಸುಮ್ಮನೆ ಎಲ್ಲವನ್ನೂ ಕೇಳುತ್ತಾ ಹೋದೆ.

ಅಮ್ಮನಿಗೆ ನನ್ನ ಮನಸ್ಸು ಅರಿವಾಗಿತ್ತು. ಮಗಳು ಮನಸ್ಸಲ್ಲಿರುವುದನ್ನು ಬಾಯ್ಬಿಡುತ್ತಿಲ್ಲ. ಎಷ್ಟೆಂದರೂ ಹೆತ್ತವ್ವ ಅವಳಿಗೆ ನನ್ನ ಮನದ ದುಗುಡ ಅರ್ಥವಾಗದೇ ಇರುತ್ತಾ. ಅದಕ್ಕೇ ಅವಳು ಕೊನೆಯದಾಗಿ ಮಗಳೇ ಒತ್ತಾಯವಿಲ್ಲ ಎಂದು ಸಾಗ ಹಾಕಿದಳು. ಆಕೆಗೆ ಅಪ್ಪನಿಗೆ ಏನ್ ಹೇಳೋದು ಅನ್ನೋ ಕಳವಳ ಶುರುವಾಗಿತ್ತು.

ಆದರೆ ಇನಿಯಾ, ಅಂದು ರಾತ್ರಿ ನಿದ್ರೆಯೇ ಹತ್ತಲಿಲ್ಲ. ಎಂದೋ ಕಳೆದು ಹೋಗಲಿದ್ದ ಹುಡುಗಿಯ ಆಂತರ್ಯವನ್ನು ಅರಿತು ಭರವಸೆಯ ಬೆಳಕು ನೀಡಿದವ ನೀನು. ಹೃದಯದಲ್ಲಿ ಅಡಗಿದ್ದ ದುಃಖವನ್ನು ಹೇಳಿದಾಗ ಮುದ್ದು ಮಗುವಿನಂತೆ ಸಲಹಿದವನು ನೀನು. ಜೀವನದ ಪ್ರತಿ ಕ್ಷಣದ ಸಂಭ್ರಮಕ್ಕೆ ದಾರಿ ತೋರಿದವನು ನೀನು. ಆದಕ್ಕೇ ಮದುವೆಯಾಗುವುದಾದರೆ ನಿನ್ನನ್ನೇ ಎಂದು ತೀರ್ಮಾನಿಸಿ ಅಮ್ಮನಿಗೆ ಹೇಳಲು ಹೊರಟಿದ್ದೇನೆ. ಅವಳಿಗೆ ಮಗಳ ಮಾತು ಅರ್ಥವಾಗುತ್ತೆ. ಅಪ್ಪ ಒಪ್ಪಿ ಬಿಟ್ಟರೆ ನಮ್ಮ ಸಂಸಾರ ಆನಂದ ಸಾಗರ!

ನಿನ್ನ ಹುಡುಗಿ

LEAVE A REPLY

Please enter your comment!
Please enter your name here