ಮತ್ತೆ ಮಳೆ ಬರುವ ಮುನ್ನ ಒಂದು ಬಾರಿ ಬಂದು ಹೋಗುವೆಯಾ ಪ್ಲೀಸ್ !

ಇನಿಯಾ,
ಈ ಜೋರಾದ ಬಿಸಿಲ ನಡುವೆ ಮಳೆ ಬಂದರೆ ಮಾತ್ರ ನಿನಗೆ ನಾನು ನೆನಪಾಗ್ತೀನಿ ಅಲ್ವಾ? ಅದ್ಕೇ ನಿನ್ ಜತೆ ಠೂ. ಮಾತೂ ಬೇಡ, ನಿನ್ನ ಮುತ್ತೂ ಬೇಡ. ಚಿತ್ತ ಚೋರಾ ಕೋಪ ಬಂತಾ? ಇಲ್ಲಿ ಮಳೆ ನಿಂತಿದೆ. ಆದರೆ ನೆನಪುಗಳ ಮೆರವಣಿಗೆ ನಿಂತಿಲ್ಲ. ಸೂರ್ಯ ನೆತ್ತಿಗೇರುತ್ತಿದ್ದಂತೆ ದಟ್ಟ ಮೋಡ ಆವರಿಸುತ್ತದೆ. ಬೀಸುವ ಜೋರಾದ ಗಾಳಿ ಮೋಡವನ್ನು ತನ್ನ ಸಂಗಾತಿಯನ್ನಾಗಿಸಿ ಕೊಂಡೊಯ್ಯುತ್ತವೆ.

ಆದರೆ ನಿನ್ನ ಸುಳಿವೇ ಇರುವುದಿಲ್ಲ. ಗಾಳಿ ಮೋಡದ ಬೆಸುಗೆಯನ್ನು ಕಂಡು ನಾನು ಇಲ್ಲಿ ಒಬ್ಬಂಟಿಯಾಗಿ ಕುಳಿತು ನಾವಿಬ್ಬರೂ ಒಂದುಗೂಡುವ ಕ್ಷಣವನ್ನು ಕನಸು ಕಾಣಲಾರಂಭಿಸುತ್ತೇನೆ.


ಹಾಗೆ ಮೋಡ ಗಾಳಿ ಜತೆ ಸೇರಿ ಹೋಗುವಾಗ ಸುರಿಯುವ ಮಳೆ ಹನಿಯ ಮೈ ಸೋಕಿದಾಕ್ಷಣ ಏನೋ ಪುಳಕ! ಆದರೆ, ಮಳೆ ಹನಿಯನ್ನಾದರೂ ನಂಬಬಹುದು, ನಿನ್ನನ್ನಲ್ಲ. ನೀನು ಬಂದೇ ಬರುತೀಯಾ ಎಂದು ನಾ ಕಾದು ಕುಳಿತ ದಿನವೆಲ್ಲಾ ನನಗೆ ಇದುವರೆಗೆ ಸಿಕ್ಕಿದ್ದು ಬರೀ ನಿರಾಸೆ. ಅದಕ್ಕೇ ಈ ಬಾರಿ ಒಂದು ಭಿನ್ನಹ. ಇಲ್ಲ ಎನ್ನಬೇಡ. ಮುಂದಿನ ಮಳೆ ಆವರಿಸಿಕೊಳ್ಳುವ ಮುನ್ನ ಒಂದು ಬಾರಿ ಬಂದು ಹೋಗು ಪ್ಲೀಸ್.

ನಾವಿಬ್ಬರೂ ಜತೆಯಲ್ಲಿ ಸಾಗುವುದನ್ನು ಕಂಡು ಎಲ್ಲರೂ ಅಸೂಯೆಪಟ್ಟುಕೊಳ್ಳಬೇಕು. ಹಾಗೆ ನಾವು ಹೋಗಿ ಸೇರುವ ಜಾಗೆಯಲ್ಲಿ ನೀನು ನನ್ನ ಕೆಣಕಬೇಕು, ಪ್ರೀತಿಸಬೇಕು, ಮುದ್ದಿಸಬೇಕು, ನನ್ನ ಕೆನ್ನೆ ರಂಗೇರಿಸಬೇಕು. ನೀನಿಷ್ಟೆಲ್ಲಾ ಮಾಡುತ್ತಿರಬೇಕಾದರೆ ಇನ್ಯಾವತ್ತೂ ಇಂತಹ ಕ್ಷಣಗಳು ಮರುಕಳಿಸಿ ಬರಲಾರವೇನೋ ಎಂಬಂತೆ ನಾನು ನಿನ್ನ ಎದೆಗೂಡಿನೊಳಗೆ ಹುದುಗಿಕೊಳ್ಳಬೇಕು. ಭೋರ್ಗರೆವ ಮಳೆಯಲ್ಲಿ ನಿನ್ನ ಜತೆ ಕಾಲ ಕಳೆಯುವ ಕನಸು ಎನ್ನದು, ದಯಪಾಲಿಸುವ ಸರದಿ ನಿನ್ನದು.

ನಿನ್ನ ಮುದ್ದಿನ ಮಳೆ ಹುಡುಗಿ