ತೆಂಗಿನ ಮರದಲ್ಲಿ ಮಗು ಕೂಗಿದ್ದ ನೈಜ ಘಟನೆಯ ತುಳು ಶಾರ್ಟ್ ಫಿಲ್ಮ್ ಸೂಪರ್ ಹಿಟ್!

ಮಂಗಳೂರು: ಇದು 2 ವರ್ಷ ಹಿಂದೆ ನಡೆದಿದ್ದ ಘಟನೆ. ಅಂದ್ರೆ 2015ರ ಜುಲೈ ತಿಂಗಳು. ಆಗಸದಲ್ಲಿ ಸೂರ್ಯ ಮುಳುಗಡೆಯಾಗುತ್ತಿದ್ದಂತೆ ಮನೆಯ ಪಕ್ಕದಲ್ಲಿದ್ದ ತೆಂಗಿನ ಮರದಲ್ಲಿ ಮಗುವಿನ ವಿಚಿತ್ರ ನಗುವಿನ ಸದ್ದು. ರಾತ್ರಿಯಾದರೆ ಮತ್ತೆ ಮತ್ತೆ ಅದೇ ಮಗುವಿನ ನಗುವಿನ ಕೇಕೆ. ಇದನ್ನು ಕೇಳಿದ ಮನೆಯೊಡತಿಗೆ ಗಾಬರಿ, ಆತಂಕ. ತನ್ನ ಮನೆಯವರಿಗೇನಾಗುತ್ತೋ ಎಂಬ ವಿಚಿತ್ರ ಕನವರಿಕೆ. ಕೊನೆಗೆ ಸತ್ಯ ಗೊತ್ತಾಗಿದ್ದು ಅದು ಮೊಬೈಲ್ ಫೋನಿನ ರಿಂಗ್ ಟೋನ್. 3 ದಿನಗಳ ಹಿಂದೆ ಬಂದಿದ್ದ ತೆಂಗಿನ ಕಾಯಿ ಕೀಳುವ ವ್ಯಕ್ತಿ ತೆಂಗಿನ ಕಾಯಿ ಕೀಳುವಾಗ ಫೋನ್ ಬಂದಿದೆ. ಮಾತು ಮುಗಿದ ನಂತ್ರ ಸಾಹೇಬ್ರು ಫೋನನ್ನು ತೆಂಗಿನ ಮರದಲ್ಲೇ ಬಿಟ್ಟಿದ್ದಾರೆ. ಮರದಿಂದ ಕೆಳಗಿಳಿದರೂ ಅವರಿಗೆ ಮೊಬೈಲ್ ನೆನಪಾಗಿರಲಿಲ್ಲ. ಆದರೆ ಮನೆ ತಲುಪಿದ ನಂತರ ಅವರು ಮೊಬೈಲ್‍ಗೆ ಪದೇ ಪದೇ ರಿಂಗ್ ಕೊಟ್ಟಿದ್ದಾರೆ. ಆ ಪುಣ್ಯಾತ್ಮ ಮೊಬೈಲ್ ರಿಂಗ್ ಟೋನ್‍ಗೆ ಮಗು ಅಳುವ ವಿಚಿತ್ರ ಟೋನನ್ನು ಸೆಟ್ ಮಾಡಿದ್ದ.

ಆದರೆ ಈ ಘಟನೆ ಆಗಿ ಸರಿ ಸುಮಾರು 2 ವರ್ಷವಾಗುತ್ತಾ ಬಂತು. ಈಗ ಈ ನೈಜ ಘಟನೆ ಪರೋಕ್ಷ್ ಎಂಬ ಹೆಸರಿನೊಂದಿಗೆ ತುಳು ಭಾಷೆಯಲ್ಲಿ ಶಾರ್ಟ್ ಫಿಲ್ಮ್ (ಕಿರು ಚಿತ್ರ) ಆಗಿ ಯೂಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ವಾರದಲ್ಲೇ ಈ ಫಿಲ್ಮ್ ಸೂಪರ್ ಹಿಟ್ ಆಗಿದೆ. ದೃಶ್ಯಂ ಫಿಲಂಸ್ ಕಂಪೆನಿ ಈ ಚಿತ್ರವನ್ನು ನಿರ್ಮಿಸಿದ್ದು, ಏಪ್ರಿಲ್ 12ರಂದು ಫೇಸ್‍ಬುಕ್ ಹಾಗೂ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿರುವ 12 ನಿಮಿಷ 20 ಸೆಕೆಂಡ್‍ಗಳ ಕಿರು ಚಿತ್ರವನ್ನು 3.72 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದರೆ, ಯೂ ಟ್ಯೂಬ್‍ನಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಮೂಲತಃ ಕಾರ್ಕಳದ ಬೆಳುವಾಯಿ ನಿವಾಸಿ ಗಣೇಶ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಅಮಿತ್ ಸಿಯಲ್, ಪೂಜಾ ಉಪಾಸನಿ, ಯತೀನ್ ಮುಂತಾದವರು ಅಭಿನಯಿಸಿದ್ದಾರೆ. ತುಳು ಚಿತ್ರವಾದರೂ ಇಂಗ್ಲಿಷ್‍ನಲ್ಲಿ ಸಬ್ ಟೈಟಲ್ ಹಾಕಿರೋದ್ರಿಂದ ಜನರು ಆಸಕ್ತಿಯಿಂದ ಈ ಫಿಲ್ಮ್ ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಸುಮಾರು 16.50 ಲಕ್ಷ ರೂ. ಖರ್ಚಾಗಿದ್ದು ಬೆಳುವಾಯಿಯ ಕೆಲ್ಲಪುತ್ತಿಗೆಯಲ್ಲಿ ಶೂಟಿಂಗ್ ಮಾಡಲಾಗಿದೆ. ಮುಂಬೈಯ ತಾಂತ್ರಿಕ ತಂಡದ ಜೊತೆ ಗಣೇಶ್ ಶೆಟ್ಟಿ ಈ ಕಿರುಚಿತ್ರವನ್ನು ಚಿತ್ರೀಕರಿಸಿದ್ದಾರೆ.