ಈಕೆ ಮದುವೆಗೆ ಉಟ್ಟಿದ್ದು 3.2 ಕಿ.ಮೀ. ಉದ್ದದ ಸೀರೆ – ಹಿಡಿದಿದ್ದು 250 ವಿದ್ಯಾರ್ಥಿಗಳು

0
6

ಕೊಲಂಬೊ: ವಧುವಿನ ಅತೀ ಉದ್ದದ ಸೀರೆ ಹಿಡಿದುಕೊಳ್ಳಲು ನೂರಾರು ಶಾಲಾ ವಿದ್ಯಾರ್ಥಿಗಳನ್ನ ಬಳಸಿಕೊಂಡಿದ್ದು ಇದೀಗ ಶ್ರೀಲಂಕಾದ ನವದಂಪತಿಗೆ ಸಂಕಷ್ಟ ತಂದಿದೆ.

ಗುರುವಾರದಂದು ಇಲ್ಲಿನ ಕಾಂಡಿಯ ಸೆಂಟ್ರಲ್ ಜಿಲ್ಲೆಯಲ್ಲಿ ನವ ವಧು-ವರ ಮುಖ್ಯ ರಸ್ತೆಯಲ್ಲಿ ಹೆಜ್ಜೆ ಹಾಕಿದ್ರು. ಈ ವೇಳೆ ವಧು ಧರಿಸಿದ್ದ 3.2 ಕಿ.ಮೀ(2 ಮೈಲಿ) ಉದ್ದದ ಸೀರೆಯನ್ನ ಹಿಡಿದುಕೊಳ್ಳಲು ಸುಮಾರು 250 ಶಾಲಾ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಲಾಗಿದೆ. ಅಲ್ಲದೆ ವಿವಾಹ ಸಮಾರಂಭದಲ್ಲಿ ಇತರೆ 100 ವಿದ್ಯಾರ್ಥಿಗಳು ಫ್ಲವರ್ ಗಲ್ರ್ಸ್ ಆಗಿ ಕೆಲಸ ಮಾಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ಮಕ್ಕಳೆಲ್ಲರೂ ಸೆಂಟ್ರಲ್ ಪ್ರಾವಿನ್ಸ್‍ನ ಮುಖ್ಯಮಂತ್ರಿ ಶರತ್ ಏಕನಾಯಕ ಅವರ ಹೆಸರಿನ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಮದುವೆಗೆ ಏಕನಾಯಕ ಅವರು ವಿಶೇಷ ಅತಿಥಿಯಾಗಿದ್ದರು ಎಂದು ವರದಿಯಾಗಿದೆ. ಅಲ್ಲದೆ ಶ್ರೀಲಂಕಾದಲ್ಲೇ ವಧುವೊಬ್ಬಳು ಧರಿಸಿದ ಅತೀ ಉದ್ದದ ಸೀರೆ ಇದಾಗಿದೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಆದ್ರೆ ವಿದ್ಯಾರ್ಥಿಗಳನ್ನ ಖಾಸಗಿ ಕಾರ್ಯಕ್ರಮಕ್ಕೆ ಬಳಸಿಕೊಂಡಿದ್ದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ನ್ಯಾಷನಲ್ ಚೈಲ್ಡ್ ಪ್ರೊಟೆಕ್ಷನ್ ಅಥಾರಿಟಿ(ಎನ್‍ಸಿಪಿಎ) ಈ ಬಗ್ಗೆ ತನಿಖೆ ನಡೆಸುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್‍ಸಿಪಿಎ ಅಧ್ಯಕ್ಷರಾದ ಮರೀನಿ ಡಿ ಲಿವೆರಾ, ಈ ಕುರಿತು ತನಿಖೆಯನ್ನು ಆರಂಭಿಸಿದ್ದೇವೆ. ಮುಂದೆ ಇದೊಂದು ಟ್ರೆಂಡ್ ಆಗಬಾರದು. ಹೀಗಾಗಿ ಗಂಭೀರವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇಂತಹ ಸಮಾರಂಭಗಳಿಗೆ ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳನ್ನ ಬಳಸಿಕೊಂಡಿರುವುದು ಕಾನೂನಿಗೆ ವಿರುದ್ಧ. ಇದನ್ನು ಉಲ್ಲಂಘಿಸಿದವರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುತ್ತದೆ ಎಂದು ತಿಳಿಸಿದ್ದಾರೆ. ಅವರು ಮಾಡಿದ್ದು ಮಕ್ಕಳ ಹಕ್ಕುಗಳ ಉಲ್ಲಂಘನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಮಾಡಿ, ಅವರ ಭದ್ರತೆಯನ್ನ ಲೆಕ್ಕಿಸದೆ, ಮಕ್ಕಳ ಘನತೆಗೆ ಧಕ್ಕೆ ತಂದಿರುವುದು ಅಪರಾಧ ಎಂದು ಹೇಳಿದ್ದಾರೆ.