ಲಂಡನ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಏನೆಲ್ಲಾ ಮಾಡಿದ್ರು ಗೊತ್ತಾ?

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಶೂಟಿಂಗ್ ಗಾಗಿ ವರ್ಷಕ್ಕೆ ನಾಲ್ಕು ಬಾರಿಯಾದರೂ ವಿದೇಶಕ್ಕೆ ಹೋಗೋದು ಸಾಮಾನ್ಯ. ಈ ಹಿಂದೆ ಕೂಡ ಎಷ್ಟೋ ಬಾರಿ ಲಂಡನ್ ಗೆ ದಾಸ ಭೇಟಿ ನೀಡಿದ್ದರು. ಆದರೆ ಈ ಬಾರಿ ಲಂಡನ್ ನಲ್ಲಿ ಗ್ಲೋಬಲ್ ಇಂಟಗ್ರಿಟಿ ಅವಾರ್ಡ್ ಪಡೆದುಕೊಂಡು ಹಾಗೇ ಟ್ರಿಪ್ ಮುಗಿಸಿಕೊಂಡು ಮರಳಿದ್ದಾರೆ.

ದರ್ಶನ್ ಅವರ ಈ ಬಾರಿಯ ಲಂಡನ್ ಪ್ರವಾಸ ಹಿಂದಿನಂತಿರಲಿಲ್ಲ. ಒಬ್ಬ ಸಾಮಾನ್ಯ ಪ್ರವಾಸಿಗನಾಗಿ ಹೋಗಿದ್ದರೇ ಹೊರತು ನಟನಾಗಿ ಹೋಗಿರಲಿಲ್ಲ. ಇದೇ ಅ.18ಕ್ಕೆ ಮಗ ವಿನೀಶ್ ಹಾಗೂ ಸ್ನೇಹಿತ ಮಲ್ಲಿಕಾರ್ಜುನ್ ಜೊತೆ ಲಂಡನ್ ಗೆ ತೆರಳಿದ್ದು, ಒಂದು ವಾರ ಯೂರೋಪ್ ಟ್ರಿಪ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ತನ್ನ ಮಗನೊಂದಿಗೆ ಅಪರೂಪದ ಪ್ರವಾಸವನ್ನು ಕೈಗೊಂಡಿದ್ದರು. ಅಷ್ಟೇ ಅಲ್ಲದೇ ಲಂಡನ್ ನಲ್ಲಿ ವಿಶೇಷ ಕಾರ್ಯಕ್ರಮವೊಂದರಲ್ಲಿ ಸಂದರ್ಶನವನ್ನೂ ಕೊಟ್ಟು ಬಂದಿದ್ದಾರೆ.

ಅಕ್ಟೊಬರ್ 19ಕ್ಕೆ ಪ್ರಶಸ್ತಿ ಪಡೆದಕೊಂಡು ನಂತರ ಲಂಡನ್ ಸ್ನೇಹಿತರ ಜೊತೆಗೂಡಿ ಜಾಲಿ ಟೂರ್ ಮಾಡಿದ್ದಾರೆ. ಅಲ್ಲಿನ ಕಲರ್ ಫುಲ್ ಸ್ಥಳಗಳನ್ನು ನೋಡಿ, ಉಳಿದೆಲ್ಲ ಕೆಲಸದ ಟೆನ್ಷನ್ ಅನ್ನು ಪಕ್ಕಕ್ಕಿಟ್ಟು ಸಾದಾಸೀದಾ ತಂದೆಯಂತೆ ಮಗನಿಗೆ ಇಷ್ಟವಾದ ಊಟ ತಿಂಡಿ ಕೊಡಿಸಿ ಪ್ರವಾಸ ಮುಗಿಸಿದ್ದಾರೆ.

ಲಂಡನ್‍ನಲ್ಲಿ ಕನ್ನಡಿಗರ ದೊಡ್ಡ ಕೂಟವೇ ಇದೆ. ಅಲ್ಲಿನ ಅಭಿಮಾನಿಗಳಿಗಾಗಿ ದಚ್ಚು ಪ್ರಖ್ಯಾತ ಬಿಬಿಸಿ ರೇಡಿಯೋ ಕಚೇರಿಗೆ ತೆರಳಿ ವಿಶೇಷ ಸಂದರ್ಶನ ನೀಡಿ ಬಂದಿದ್ದಾರೆ.

ದರ್ಶನ್ ಸಿನಿಮಾಗಳು ಮಾತ್ರವಲ್ಲದೇ ಪ್ರಸ್ತುತ ಕನ್ನಡ ಚಿತ್ರಗಳು ಇಂಗ್ಲೆಂಡಿನಲ್ಲಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿವೆ. ಈ ಹಿಂದೆ ತಮ್ಮ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ವೇಳೆ ಲಂಡನ್‍ಗೆ ಶಿವಣ್ಣ, ರಕ್ಷಿತ್ ಶೆಟ್ಟಿ, ಗಣೇಶ್ ಸೇರಿದಂತೆ ಅನೇಕ ನಟರು ಬಿಬಿಸಿಗೆ ತೆರಳಿ ಸಂದರ್ಶನ ನೀಡಿದ್ದರು. ಹಾಗೆಯೇ ದರ್ಶನ್ ಕೂಡ ಬಿಬಿಸಿ ರೇಡಿಯೋದಲ್ಲಿ ಮಾತನಾಡಿ ಬಂದಿದ್ದಾರೆ.