ಅಯ್ಯೋ ಯೋಧ ನಿನ್ನ ದುಸ್ಥಿತಿಯೇ

ಅಯ್ಯೋ ಯೋಧ ನಿನ್ನ ದುಸ್ಥಿತಿಯೇ

ದೇಶ ಕಾಯುವ ಯೋಧರ ಬಗ್ಗೆ ನಮಗೊಂದು ಹೆಮ್ಮೆ.ನಮ್ಮ ರಕ್ಷಣೆಯ ಸಲುವಾಗಿ ತಮ್ಮ ಕುಟುಂಬವನ್ನು ಮರೆತ ಸೈನಿಕನ ಬಗ್ಗೆ ಗೌರವ, ಪ್ರೀತಿ. ಆದ್ರೆ ನಮ್ಮನಾಳುವ ಸರ್ಕಾರಗಳು, ಸೈನಿಕರ ಮೇಲಾಧಿಕಾರಿಗಳಿಗೆ ಈ ಸೈನಿಕರ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ ಅನ್ನುವುದು ಸಾವಿರ ಸಲ ಸಾಬೀತಾಗಿದೆ. ಯಾರ ಅವಧಿಯಲ್ಲಿ ಸೇನಾ ಅವ್ಯವಹಾರ, ಭ್ರಷ್ಟಚಾರಗಳಾಗಿದೆ ಅನ್ನುವುದಕ್ಕೆ ಇತಿಹಾಸವೇ ಸಾಕ್ಷಿ ಹೇಳುತ್ತಿದೆ.ಮೋದಿ ಅಧಿಕಾರಕ್ಕೆ ಬಂದ ಮೇಲಾದ್ರೂ ಪರಿಸ್ಥಿತಿ ಸುಧಾರಿಸಬಹುದು ಅಂದುಕೊಂಡ್ರೆ ಅದು ಕೂಡಾ ಸುಳ್ಳಾಗಿದೆ. ಕಾಂಗ್ರೆಸ್, ಬಿಜೆಪಿ ಸೇನೆಯ ಪಾಲಿಗೆ ಎರಡು ಮುಖದ ಒಂದೇ ನಾಣ್ಯ.

ಗಡಿಯಲ್ಲಿ ಮಳೆ, ಬಿಸಿಲು, ಚಳಿ ಅನ್ನದೇ ಗಡಿ ಕಾಯುವ ಸೈನಿಕರ ಪರಿಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ. ಗಡಿ ಕಾಯುವ ಯೋಧರಿಗೆ ಸರ್ಕಾರದ ಕಡೆಯಿಂದ ಸೌಲಭ್ಯಗಳು ಘೋಷಣೆಯಾಗುತ್ತದೆ. ಅದ್ರೆ ಅದು ಜಾರಿಯಾಗುವುದಿಲ್ಲ. ಜಾರಿಯಾದ್ರು ಕಟ್ಟ ಕಡೆಯ,ತುತ್ತ ತುದಿಯ ಯೋಧವರೆಗೆ ತಲುಪುವುದಿಲ್ಲ. ಮೇಲಾಧಿಕಾರಿಗಳು ಅದನ್ನು ತಿಂದು ಉಂಡು ತೇಗುತ್ತಿದ್ದಾರೆ.ಇದು ಬಹಿರಂಗವಾಗಿದ್ದು ಬಿ ಎಸ್ ಎಫ್  29 ನೇ ಬೆಟಾಲಿಯನ್ ಯೋಧ ತೇಜ್ ಬಹದ್ದೂರ್ ಯಾದವ್ ತಮ್ಮ ಸಂಕಷ್ಟವನ್ನು ಫೇಸ್ ಬುಕ್ ನಲ್ಲಿ ಹಾಕಿದ ಮೇಲೆ. ಒಣಗಿದ ಪರೋಟ, ಅರಶಿನ ಮಿಶ್ರಿತ ದಾಲ್ ಕೊಟ್ಟು ಗಡಿ ಕಾಯಲು ಸಾಧ್ಯವೇ ಎಂದು ತೇಜ್ ಬಹದ್ದೂರ್ ಪ್ರಶ್ನಿಸಿದ್ದಾರೆ. ತಮ್ಮ ರೇಶನ್ ಅನ್ನು ಅಧಿಕಾರಿಗಳು ಹೇಗೆ ಲೂಟಿತ್ತಿದ್ದಾರೆ ಅನ್ನುವುದನ್ನು ಅವರು ವಿವರಿಸಿದ್ದಾರೆ.. ನಿಜಕ್ಕೂ ಇವರು ಹೇಳಿರುವ ಕಥೆ ನೋಡಿದ್ರೆ ಮನ ಕಲುಕುತ್ತದೆ. ಮನೆ ಮಠ ಕುಟುಂಬ ಎಲ್ಲವನ್ನೂ ಬಿಟ್ಟು ಬಂದು ದೇಶ ಸೇವೆ ಸಲ್ಲಿಸುತ್ತಿದ್ರೆ ಹಿರಿಯ ಅಧಿಕಾರಿಗಳು ಹೀಗಾಡುತ್ತಿದ್ದಾರೆ. ದೇವರು ಕೊಟ್ರು ಪೂಜಾರಿ ಬಿಡ ಅನ್ನುವ ಪರಿಸ್ಥಿತಿಯಾಗಿದೆ. ಇದೀಗ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ. ನಮ್ಮ ಹಿಂದಿನ ರಕ್ಷಣಾ ಸಚಿವರುಗಳು ಸರಿಯಾಗಿ ಕೆಲಸ ನಿರ್ವಹಿಸಿದ್ರೆ ಹೀಗೆ ಆಗುತ್ತಿರಲಿಲ್ಲ. ಹಿಂದಿನ ಸರ್ಕಾರಗಳಿಗೆ ಭ್ರಷ್ಟಚಾರ ನಡೆಸಲು ಸಮಯ ಸಾಕಾಗಲಿಲ್ಲ. ಇನ್ನು ಸೇನೆ ಬಗ್ಗೆ ಗಮನ ಹರಿಸಲು ಸಮಯವೆಲ್ಲಿತ್ತು. ಆದ್ರೆ ಸೇನೆಯ, ಸೈನಿಕರ ಬಗ್ಗೆ ಸಿಕ್ಕಾಪಟ್ಟೆ ಭಾಷಣ ಬಿಗಿಯುವ ಮೋದಿಗೂ ವೀರ ಯೋಧನ ಸಂಕಷ್ಟ ಅರ್ಥವಾಗಲಿಲ್ಲ.

Leave a Reply

Your email address will not be published. Required fields are marked *