ಎಂದೋ ಓದಿದ ಚಂದಮಾಮ ಕಥಾ ಪಾತ್ರಗಳ ನಾ ಬಾಹುಬಲಿಯಲ್ಲಿ ಕಂಡೆ!

ಸಿನಿಮಾ ರಿಲೀಸ್ ಆದ ದಿನವೇ ನಾನು ಫಿಲ್ಮ್ ನೋಡುವ ವ್ಯಕ್ತಿ ಅಲ್ಲ. ಆದ್ರೂ ಈ ಬಾರಿ ಬೈ ಮಿಸ್ ಆಗಿ ಬಾಹುಬಲಿ ನೋಡುವ ಅವಕಾಶ ಸಿಕ್ಕಿತ್ತು. ಸೋ ಹೇಗಿದೆ ಅಂತ ಬಹಳಷ್ಟು ಜನ ಕೇಳಿದ್ರು ಅದಕ್ಕೆ ಇಲ್ಲಿ ಉತ್ತರ. ಮೊದಲೇ ಹೇಳಿಬಿಡ್ತೇನೆ ನಾನು ಸಿನಿಮಾ ವಿಮರ್ಶಕನಲ್ಲ, ಸೋ ಈ ವಿಚಾರವನ್ನು ತಿಳಿದು ಓದಬೇಕು ಎನ್ನುವ ವಿನಂತಿ ನನ್ನದು.

1. ಕಥೆ ತುಂಬಾ ಸರಳ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಬಲ್ಲಾಳನಿಗೆ ಬಾಹುಬಲಿ ಮೇಲೆ ದ್ವೇಷ. ದೇವಸೇನಾಳ ಮೇಲೆ ಬಲ್ಲಾಳ, ಬಾಹುಬಲಿಗೆ ಪ್ರೀತಿ. ಶಿವಗಾಮಿ ವರ್ಸಸ್ ದೇವಸೇನಾ ನಡುವೆ ಪ್ರತಿಷ್ಠೆಯ ಯುದ್ದ ಆರಂಭ. ನಿನಗೆ ಪ್ರೀತಿ ಬೇಕೋ, ಸಿಂಹಾಸನ ಬೇಕೋ ಅಂತಾ ಶಿವಗಾಮಿ ಖಡಕ್ ಮಾತು. ಬಲ್ಲಾಳನಿಗೆ ಪಟ್ಟಾಭಿಷೇಕ. ಬಾಹುಬಲಿಗೆ ಮದುವೆ. ಕಟ್ಟಪ್ಪನಿಂದ ಬಾಹುಬಲಿ ಕೊಲೆ. ಕೊನೆಗೆ ಯುದ್ಧ. ಸೇಡು ತೀರಿಸಿಕೊಂಡ ದೇವಸೇನಾ. ಶಿವುಡುಗೆ ಪಟ್ಟಾಭಿಷೇಕ ಇಲ್ಲಿಗೆ ಮುಕ್ತಾಯ.

2. ಸರಳ ಕಥೆಯನ್ನು ಮೂರು ಗಂಟೆಗಳ ಕಾಲ ವಿಸ್ತರಿಸುವುದು ಸುಲಭ. ಜನರ ಮನಸ್ಸನ್ನು ಗೆಲ್ಲೋದು ಕಷ್ಟ. ಆದ್ರೆ ರಾಜಮೌಳಿ ಗೆದ್ದಿದ್ದಾರೆ. ಹೇಗೆ ಗೆದ್ದಿದ್ದಾರೆ ಅನ್ನೋದನ್ನು ಕೊನೆಗೆ ಹೇಳಿದ್ದೇನೆ.

3. ಸಾಮಾನ್ಯವಾಗಿ ಸಿನಿಮಾದಲ್ಲಿ ಹೀರೋಯಿನ್ ಮೇಲೆ ರೌಡಿಗಳು ದಾಳಿ ಮಾಡಿದಾಗ ಹೀರೋ ಕಾಪಾಡುತ್ತಾನೆ. ಆದರೆ ಇದರಲ್ಲಿ ಭಿನ್ನ. ಆರಂಭದ ದೃಶ್ಯದಲ್ಲಿ ದೇವಸೇನಾ ಮೇಲೆ ದಾಳಿ ಮಾಡಿದಾಗ ಆಕೆಯೇ ಹೋರಾಡುತ್ತಾಳೆ.

4. ಚಂದಮಾಮ ಕಥೆ ಪುಸ್ತಕ ಓದಿದವರಿಗೆ ಗೊತ್ತಿರಬಹುದು. ಹಂಸ ಪಕ್ಷಿಗಳು, ಹಡಗುಗಳು, ಯುದ್ಧಗಳು ಇತ್ಯಾದಿ ವಿಚಾರಗಳು ಬರುತ್ತವೆ. ಅವುಗಳನ್ನು ನಾನು ಚಿತ್ರದಲ್ಲಿ ನೋಡಿದ್ದೆ. ಇವುಗಳನ್ನು ರಿಯಾಲಿಟಿಗೆ ತರುವುದು ಕಷ್ಟ. ಆದರೆ ಅನುಷ್ಕಾ ಮತ್ತು ಪ್ರಭಾಸ್ ಹಂಸದ ಹಡಗಿನಲ್ಲಿ ಸಂಚರಿಸುವ ದೃಶ್ಯ ಇದೆ. ಈ ದೃಶ್ಯ ಚೆನ್ನಾಗಿ ಮೂಡಿಬಂದಿದೆ.

5. ಚಿತ್ರದಲ್ಲಿ ಗ್ರಾಫಿಕ್ಸ್ ಹೈಲೈಟ್ ಆದ್ರೂ ಕಥೆಗೆ ಪೂರಕವಾಗಿ ಆ ದೃಶ್ಯಗಳನ್ನು ಸೇರಿಸಿ ಚಿತ್ರವನ್ನು ಕ್ಲಿಕ್ ಮಾಡುವುದು ಸವಾಲಿನ ಕೆಲಸ. ಈ ವಿಚಾರದಲ್ಲೂ ರಾಜಮೌಳಿ ಯಶಸ್ವಿಯಾಗಿದ್ದಾರೆ. ಉದಾಹರಣೆಗೆ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುವ ದೃಶ್ಯದಲ್ಲಿ ಬೆಂಕಿಯ ಜ್ವಾಲೆ ಕಾಣಿಸುತ್ತದೆ. ವಿರೋಧಿಗಳನ್ನು ಹೇಗೆ ಬೇಕಾದ್ರೂ ಕೊಲ್ಲಬಹುದು. ಆದರೆ ಬಾಹುಬಲಿ ಅವರ ಮೇಲೆ ಬೆಟ್ಟದಿಂದಲೇ ಬೆಂಕಿ ಹಾಕಿ ಕೊನೆಗೆ  ಆ ಬೆಂಕಿಯ ನಡುವೆ ಕೊಲೆಯಾಗುವ ದೃಶ್ಯವನ್ನು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.

6. ರಾಜಮೌಳಿ ಮೂಲತಃ ಎಂಜಿನಿಯರ್. ಅವರು ಯಾವ ಬ್ರಾಂಚ್ ಓದಿದ್ದಾರೆ ಅನ್ನೋದು ಗೊತ್ತಿಲ್ಲ. ಆದ್ರೆ ಅವರು ಎಂಜಿನಿಯರಿಂಗ್ ವೃತ್ತಿ ಮಾಡದೇ ಇದ್ರೂ ಚಿತ್ರದಲ್ಲಿ ಹಲವು ಕಡೆ ಎಂಜಿನಿಯರಿಂಗ್ ಕೆಲ್ಸವನ್ನು ಯಶಸ್ವಿಯಾಗಿ ತೋರಿಸಿದ್ದಾರೆ. ವಿಶೇಷವಾಗಿ ಎರಡೂ ಯುದ್ಧದಲ್ಲಿ ಮತ್ತು ಪ್ರಭಾಸ್ ಮತ್ತು ಅನುಷ್ಕಾ ಕಾರ್ಮಿಕರಾಗಿ ಕೆಲಸ ಮಾಡುವಾಗ ನೀರನ್ನು ಮೇಲೆತ್ತಲು ಮಾಡಿದ ಉಪಾಯ. ಜೇನು ನೋಣದಂತೆ ಸೈನಿಕರು ನೆಲದಿಂದ ಮಾಹಿಷ್ಮತಿಗೆ ಹಾರುವುದು. ಡ್ಯಾಂ ಒಡೆಯುವ ತಂತ್ರ ಎಲ್ಲವೂ ಖುಷಿ ಕೊಡುತ್ತೆ.

7. ಹೀರೋ ಟೈಟಲ್ ಸಿನಿಮಾಗಳಲ್ಲಿ ಸಾಮಾನ್ಯವಾಗಿ ಹೀರೋನೆ ಬಹಳಷ್ಟು ಸಮಯವನ್ನು ಕಬಳಿಸುತ್ತಾನೆ. ಆದರೆ ಟೈಟಲ್ ಬಾಹುಬಲಿಯಾದರೂ ಇಲ್ಲಿ ಪ್ರತಿಯೊಬ್ಬರಿಗೂ ಅಭಿನಯಕ್ಕೆ ಅವಕಾಶ ಸಿಕ್ಕಿದೆ. ಆರಂಭದಲ್ಲಿ ಕಟ್ಟಪ್ಪ, ಬಾಹುಬಲಿ ನಂತರ ಉಳಿದವರು ತೆರೆಯಲ್ಲಿ ರಂಜಿಸಿದ್ದಾರೆ. ಕಣ್ಣಿನಲ್ಲೇ ಅಕ್ರೋಶ ತೋರಿಸುವ ಬಲ್ಲಾಳದೇವ, ಕಟ್ಟಪ್ಪನ ಸ್ವಾಮಿನಿಷ್ಠೆ, ಶಿವಗಾಮಿಯ ಕೆಂಡದ ಮಾತುಗಳು, ಬಿಜ್ಜಳದೇವನ ವಕ್ರಬುದ್ಧಿ.

8. ಹೀರೋ ಹೀರೋಯಿನ್ ಆಯ್ಕೆಯಲ್ಲಿ ಎಡವಿದ್ರೆ ಫಿಲ್ಮ್ ಫ್ಲಾಪ್ ಆಗುತ್ತೆ. ಇದರಲ್ಲಿ ಈ ಫ್ಲಾಪ್ ಸೀನ್ ಗೆ ಅವಕಾಶವೇ ಇಲ್ಲ. ಪ್ರಭಾಸ್ ಅನುಷ್ಕಾ ಶೆಟ್ಟಿ ಕೆಮಿಸ್ಟ್ರಿ ಮ್ಯಾಚ್ ಆಗಿದೆ. ರೀಲ್ ಆದ್ರೂ ರಿಯಲ್ ಜೋಡಿಗಳಂತೆ ಅಭಿನಯಿಸಿದ್ದು ಪ್ಲಸ್ ಪಾಯಿಂಟ್.

9. ರಾಜಮೌಳಿ ಏನು ಯೋಚನೆ ಮಾಡುತ್ತಾರೋ ಅದಕ್ಕೆ ತಕ್ಕಂತೆ ಪತ್ನಿ ರಮಾ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಇನ್ನು ಎಡಿಟಿಂಗ್, ಕ್ಯಾಮೆರಾ, ಸಂಗೀತದ ಬಗ್ಗೆ ಮಾತನಾಡುವಷ್ಟು ನನಗೆ ತಿಳಿದಿಲ್ಲ. ಬೋರ್ ಅಂತೂ ಆಗಲ್ಲ ಅಷ್ಟು ಮಾತ್ರ ಹೇಳಬಲ್ಲೆ.

10. ನಿಮ್ಮ ಫಿಲ್ಮ್ ಹಿಟ್ ಆಗಲು ಕಾರಣ ಏನು ಎಂದು ಕೇಳಿದ್ದಕ್ಕೆ ರಾಜಮೌಳಿ, ನಾನು ಬಾಲ್ಯದಲ್ಲಿ ರಾಮಾಯಣ, ಮಹಾಭಾರತ, ಅಮರ ಚಿತ್ರಕಥಾಗಳನ್ನು ಓದುತ್ತಿದ್ದೆ. ಓದಿದ ಬಳಿಕ ಸಹಪಾಠಿಗಳಲ್ಲಿ, ಸಂಬಂಧಿಕರಲ್ಲಿ ಚೆನ್ನಾಗಿ ಕಥೆ ಹೇಳುತ್ತಿದ್ದೆ. ಬಾಲ್ಯದಲ್ಲೇ ಈ ಫೌಂಡೇಷನ್ ಬಿದ್ದ ಕಾರಣ ಕಥೆ ಹೇಳುವ ಹೇಳುವ ಶೈಲಿಯನ್ನು ಕಲಿತೆ ಅಂತ ಹೇಳಿದ್ರು. ಸೋ ಈ ಬಾಹುಬಲಿ ಫಿಲ್ಮ್ ಚೆನ್ನಾಗಿದೆಯೇ ಅಂತ ನನ್ನಲ್ಲಿ ಕೇಳಿದ್ರೆ ಅಕ್ಕನ ಮಗಳ ಉದಾಹರಣೆ ಕೊಡ್ತೇನೆ. ಅವಳೀಗ 5ನೇ ತರಗತಿ. ಆಕೆಗೆ ತೆಲುಗು ಅರ್ಥ ಆಗಲ್ಲ. ಆದ್ರೆ ಸಿನಿಮಾದ ನೋಡುವ ವೇಳೆ ಕಣ್ಣಲ್ಲಿ ನೀರು ಬಂತು. ಮತ್ತೊಮ್ಮೆ ನೋಡಬೇಕು ಅಂತಾ ಹೇಳಿದ್ದಾಳೆ.

– ಅಶ್ವತ್ಥ್ ಸಂಪಾಜೆ