ತನ್ನ ಸೌಂದರ್ಯದ ಗುಟ್ಟನ್ನು ಬಹಿರಂಗಪಡಿಸಿದ್ರು ನಟಿ ಪ್ರೇಮಾ!

0
10

ಬೆಂಗಳೂರು: ಚಂದನವನದ ಚೆಂದದ ಬೆಡಗಿ ಪ್ರೇಮಾ ಲಾಂಗ್ ಗ್ಯಾಪ್ ನಂತರ `ಉಪೇಂದ್ರ ಮತ್ತೆ ಬಾ’ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಆದರೆ ಇಷ್ಟು ದಿನ ಪ್ರೇಮಾ ಸಿನಿಮಾಗಳಲ್ಲಿ ಯಾಕೆ ನಟಿಸಿಲ್ಲ ಎಂಬುದರ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ತುಂಬಾ ಜನ ಇದು ನನ್ನ ಕಮ್ ಬ್ಯಾಕ್ ಸಿನಿಮಾ ಅಂತಾ ಹೇಳುತ್ತಿದ್ದಾರೆ. ನಾನು ಚಿತ್ರರಂಗದಿಂದ ದೂರ ಉಳಿದಿರಲಿಲ್ಲ. ಒಳ್ಳೆಯ ಕಥೆಯ ಬರುವಿಕೆಗಾಗಿ ಕಾದಿದ್ದೇ ವಿನಃ ಇದು ನನ್ನ ಕಮ್ ಬ್ಯಾಕ್ ಅಲ್ಲ. ಶಿಶಿರ ಸಿನಿಮಾದಲ್ಲಿ ನಟಿಸಿದ್ದೆ. ಅದರಲ್ಲಿ ನನ್ನದು ತುಂಬಾ ವಿಭಿನ್ನ ಪಾತ್ರ. ಸಿನಿಮಾ ಒಳ್ಳೆಯ ಕಥೆಯನ್ನು ಹೊಂದಿದ್ದರೂ ಪ್ರೇಕ್ಷಕರನ್ನು ತಲುಪಲ್ಲಿ ಅದು ವಿಫಲವಾಯಿತು. ಅಂದು ನಾನು ನಿರ್ಧಾರ ಮಾಡಿ, ಪ್ರೇಕ್ಷಕರಿಗೆ ತಲುಪುವಂತಹ ಪಾತ್ರಕ್ಕಾಗಿ ಕಾಯುತ್ತಿದ್ದೆ ಎಂದು ಪ್ರೇಮಾ ಹೇಳಿದರು.

ನನಗೆ ಈ ಹಿಂದೆ ಒಂದೇ ರೀತಿಯ ಪಾತ್ರಗಳು ಬರ್ತಾ ಇತ್ತು. ಆದರೆ ನನಗೆ ಕ್ರಿಯೇಟಿವಿಟಿ ತೋರಿಸುವಂತಹ ಪಾತ್ರಗಳು ಬೇಕಾಗಿತ್ತು. ಒಂದು ದಿನ ಮನೆಗೆ ಸಿನಿಮಾ ನಿರ್ದೇಶಕರು ಮತ್ತು ನಿರ್ಮಾಪಕರು ಬಂದು `ಉಪೇಂದ್ರ ಮತ್ತೆ ಬಾ’ ಚಿತ್ರದ ಆಫರ್ ನೀಡಿದರು. ಆ ವೇಳೆ ನಾನು ಸಿನಿಮಾ ಮಾಡಲ್ಲ ಎಂದು ತಿರಸ್ಕರಿಸಿದಾಗ ಉಪ್ಪಿ ಸರ್ ಫೋನ್ ಮಾಡಿ ಸಿನಿಮಾ ಮಾಡುವಂತೆ ಬಲವಂತ ಮಾಡಿದರು. ಕೊನೆಗೆ ಈ ಸಿನಿಮಾ ಬಗ್ಗೆ ನನಗೂ ಮತ್ತು ನನ್ನ ತಾಯಿ ನಡುವೆ ದೊಡ್ಡ ಚರ್ಚೆಯೇ ನಡೆಯಿತು. ಬಳಿಕ ತಾಯಿಯ ಮಾತಿನಂತೆ ಸಿನಿಮಾವನ್ನು ಒಪ್ಪಿಕೊಂಡೆ ಎಂದು ತಿಳಿಸಿದರು.

ಪ್ರೇಮಾ ಸೌಂದರ್ಯದ ಗುಟ್ಟು: ನಾನು ತುಂಬಾ ಚೆನ್ನಾಗಿ ತಿನ್ನುವುದರ ಜೊತೆಗೆ ಚೆನ್ನಾಗಿ ನಿದ್ದೆ ಮಾಡುತ್ತೇನೆ. ಆಹಾರ ಶೈಲಿಯಲ್ಲಿ ಶಿಸ್ತು ಮುಖ್ಯವಾಗುತ್ತದೆ. ಆ ಶಿಸ್ತನ್ನು ನಾನು ಅಳವಡಿಸಿಕೊಂಡಿದ್ದೇನೆ. ನನಗೆ ಚಿಕನ್ ಅಂದರೆ ತುಂಬಾ ಇಷ್ಟ. ನಾನು ಎಷ್ಟೇ ಆಹಾರವನ್ನು ಸೇವನೆ ಮಾಡಿದರೂ, ಅಷ್ಟೇ ವರ್ಕ್ ಔಟ್ ಮಾಡುತ್ತೇನೆ. ಕೊಡಗಿಗೆ ಹೋದಾಗ ಗೆಳೆಯರೊಂದಿಗೆ ಸುತ್ತಾಡೋದು, ಬಗೆ ಬಗೆಯ ತಿನಿಸುಗಳನ್ನು ಸವಿಯುವುದು ನನಗೆ ಇಷ್ಟವಾಗುತ್ತದೆ. ಕೊಡಗಿಗೆ ಹೋಗಿ ಬಂದರೆ ನಾನು ತುಂಬಾ ದಪ್ಪ ಆಗ್ತೀನಿ. ಆದರೆ ಕೇವಲ 15 ದಿನಗಳಲ್ಲಿ ವರ್ಕ್ ಔಟ್ ಮಾಡಿ ಫಿಟ್ ಆಗುತ್ತೇನೆ ಎಂದು ಸೌಂದರ್ಯದ ಗುಟ್ಟನ್ನು ರಟ್ಟು ಮಾಡಿದರು.

ಉಪೇಂದ್ರ ರಾಜಕೀಯ: ಉಪೇಂದ್ರ ಹಲವು ದಿನಗಳಿಂದ ರಾಜಕೀಯ ಕನಸನ್ನು ಕಂಡಿದ್ದರು. ಸಮಾಜದಲ್ಲಿ ಏನಾದರೂ ಹೊಸತನದ ಬದಲಾವಣೆಯನ್ನು ತರಲು ಹಾತೊರೆಯುತ್ತಿದ್ದರು. ಇಂದು ತಮ್ಮದೇ ಆದ ಹೊಸ ಪಕ್ಷವನ್ನು ಆರಂಭಿಸಿದ್ದಾರೆ. ಉಪೇಂದ್ರ ಅವರ ಮುಂದಿನ ರಾಜಕೀಯ ಜೀವನ ಚೆನ್ನಾಗಿರಲಿ ಎಂದು ಪ್ರೇಮಾ ಶುಭ ಕೋರಿದರು.

ಮತ್ತೆ ಸಿನಿಮಾ ಮಾಡ್ತಾರಾ?: ಲಾಂಗ್ ಬ್ರೇಕ್ ಬಳಿಕ ಪ್ರೇಮಾ ಬಣ್ಣ ಹಚ್ಚಿದ್ದು, ಮತ್ತೆ ಸಿನಿಮಾ ಮಾಡ್ತೀರಾ ಪ್ರಶ್ನೆಗೆ, ನಾನು ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಚೆನ್ನಾಗಿರುವ ಸ್ಕ್ರಿಪ್ಟ್ ಬಂದರೆ ಖಂಡಿತಾ ನಟಿಸುತ್ತೇನೆ. ವರ್ಷಕ್ಕೆ ಒಂದಾದರೂ ಸಿನಿಮಾ ಮಾಡುತ್ತೇನೆ ಎಂದು ಉತ್ತರಿಸಿದರು.

ಸದ್ಯ `ಉಪೇಂದ್ರ ಮತ್ತೆ ಬಾ’ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಬೆಳ್ಳಿ ತೆರೆಗೆ ಬರಲಿದೆ. ಸಿನಿಮಾದಲ್ಲಿ ಉಪೇಂದ್ರ ದ್ವಿ-ಪಾತ್ರದಲ್ಲಿ ಕಾಣಿಸಿಕೊಂಡರೆ, ನಾಯಕಿಯರಾಗಿ ಪ್ರೇಮಾ ಮತ್ತು ಶೃತಿ ಹರಿಹರನ್ ಜೊತೆಯಾಗಿದ್ದಾರೆ. ಚಿತ್ರಕ್ಕೆ ಅರುಣ್ ಲೋಕನಾಥ್ ಆಕ್ಷನ್ ಕಟ್ ಹೇಳಿದ್ದು, ಶ್ರೀಕಾಂತ್, ಶಶಿಕಾಂತ್, ನರೇಂದ್ರನಾಥ್ ಜಂಟಿಯಾಗಿ ಬಂಡವಾಳ ಹಾಕಿದ್ದಾರೆ.

 

 

 

 

LEAVE A REPLY

Please enter your comment!
Please enter your name here